ಬೆಳಗಾವಿ: 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿರುವ ಕ್ರಮ ಖಂಡಿಸಿ ಬಿಜೆಪಿ ನಾಯಕರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡೋದೊಂದು ಮಾಡೋದೊಂದು. ಬಾಯಲ್ಲಿ ಬಸವಣ್ಣನವರ ವಚನಗಳು. ಆದರೆ ಕಾರ್ಯರೂಪದಲ್ಲಿ ಬಸವಣ್ಣನವರ ಅನುಯಾಯಿಗಳ ಮೇಲೆ ಲಾಠಿ ಚಾರ್ಜ್ ಎಂದು ಕಿಡಿಕಾರಿದ್ದಾರೆ.
ಲಿಂಗಾಯಿತರ ಮೇಲೆ ಹಲ್ಲೆ ನಡೆಸುವ ಕೃತ್ಯವನ್ನು ಈ ಹಿಂದೆ ಯಾವ ಮುಖ್ಯಮಂತ್ರಿಯೂ ಮಾಡಿರಲಿಲ್ಲ. 1975ರಲ್ಲಿ ಇಡೀ ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಉಂಟಾದ ಸ್ಥಿತಿ ಈಗ ರಾಜ್ಯದಲ್ಲಿ ನಿರ್ಮಾಣವಾಗಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಪಂಚಮಸಾಲಿಗಳ ಹೋರಾಟ ನಡೆದಿತ್ತು. ಆದರೆ ನಾವು ಅವರ ಮನವಿಗೆ ಸ್ಪಂದಿಸಿ ಬೇಡಿಕೆ ಈಡೇರಿಸುವ ಕೆಲಸ ಮಾಡಿದ್ದೆವು ಎಂದು ತಿಳಿಸಿದರು.