alex Certify ಕೆಪಿಎಸ್ ಸಿ ಪರೀಕ್ಷೆ ಎಡವಟ್ಟು ಮರು ಪರೀಕ್ಷೆಗೆ ಸೂಚನೆ; ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂತು ಎಂದ ವಿಪಕ್ಷ ನಾಯಕ ಆರ್.ಅಶೋಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಪಿಎಸ್ ಸಿ ಪರೀಕ್ಷೆ ಎಡವಟ್ಟು ಮರು ಪರೀಕ್ಷೆಗೆ ಸೂಚನೆ; ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂತು ಎಂದ ವಿಪಕ್ಷ ನಾಯಕ ಆರ್.ಅಶೋಕ್

ಬೆಂಗಳೂರು: ಕೆಎಎಸ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಎಡವಟ್ಟು ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮರು ಪರೀಕ್ಷೆ ನಡೆಸುವಂತೆ ಕೆಪಿಎಸ್ ಸಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಕೆಪಿಎಸ್ ಸಿ ಪರೀಕ್ಷೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂತು ಎಂದು ಟಾಂಗ್ ನೀಡಿದ್ದಾರೆ.

ಕೆಪಿಎಸ್‌ಸಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಆಗಿರುವ ಘೋರ ಲೋಪಗಳನ್ನ ಒಪ್ಪಿಕೊಂಡು ಮರುಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದ್ದು, ಇದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಾಗೂ ಪ್ರತಿಪಕ್ಷಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದಿದ್ದಾರೆ.

ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಮರುಪರೀಕ್ಷೆಯನ್ನ ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು. ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಸೂಕ್ತ ಪರೀಕ್ಷಾ ದಿನಾಂಕ ನಿಗದಿ ಮಾಡುವುದು, ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪರೀಕ್ಷಾ ಕೇಂದ್ರಗಳ ಹಂಚಿಕೆ ಮಾಡುವುದು, ಪ್ರಶ್ನೆ ಪತ್ರಿಕೆ ರಚನೆ, ಕನ್ನಡಕ್ಕೆ ತರ್ಜುಮೆ ಸೇರಿದಂತೆ ಎಲ್ಲ ಅಂಶಗಳನ್ನ ಪರಿಗಣಿಸಿ ಈ ಹಿಂದೆ ಆದ ತಪ್ಪುಗಳು, ಲೋಪದೋಷಗಳು ಮರುಕಳಿಸದಂತೆ ಅತ್ಯಂತ ಜಾಗರೂಕತೆಯಿಂದ, ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕು.

ಈಗ ನಡೆದಿರುವ ಪರೀಕ್ಷೆಯಲ್ಲಿನ ಎಡವಟ್ಟುಗಳಿಗೆ ಕಾರಣರಾದ ಅಧಿಕಾರಿಗಳನ್ನ ಮತ್ತು ಸಿಬ್ಬಂದಿಗಳನ್ನ ಮುಲಾಜಿಲ್ಲದೆ ಕಪ್ಪುಪಟ್ಟಿಗೆ ಸೇರಿಸಬೇಕು. ಮುಂದೆ ಯಾವ ಸ್ಪರ್ಧಾತ್ಮಕ ಪರೀಕ್ಷೆಗಳ ಕರ್ತವ್ಯಕ್ಕೂ ಅವರು ನಿಯೋಜನೆಯಾಗದಂತೆ ಬ್ಲಾಕ್ ಲಿಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೆಪಿಎಸ್ ಸಿ ಪರೀಕ್ಷೆ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಪ್ರಶ್ನೆ ಆಗಿರುವುದರಿಂದ ಅವರ ಬದುಕಿನ ಜೊತೆ ಚೆಲ್ಲಾಟವಾಡದೆ, ಇದನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿ ಪರೀಕ್ಷೆ ಸುವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ನಡೆಯುವಂತೆ ಎಚ್ಚರವಹಿಸಬೇಕು ಎಂದಿದ್ದಾರೆ.

ಕೆಪಿಎಸ್ ಸಿ ಪರೀಕ್ಷೆ ಕಡೆಗೆ ಈಗ ಇಡೀ ದೇಶವೇ ಎದುರು ನೋಡುತ್ತಿದ್ದು, ಇದು ಈಗ ಕೇವಲ ಅಭ್ಯರ್ಥಿಗಳ ಪರೀಕ್ಷೆಯಾಗಿ ಉಳಿದಿಲ್ಲ. ಇದು ಇಡೀ ಕಾಂಗ್ರೆಸ್ ಸರ್ಕಾರಕ್ಕೆ ಒಂದು ಸತ್ವ ಪರೀಕ್ಷೆಯಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...