ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ನಟ ದರ್ಶನ್ ಕಾನೂನು ಕೈಗೆತ್ತಿಕೊಂಡಿದ್ದು ಸರಿಯಲ್ಲ. ಸಮಸ್ಯೆಯಾಗಿದ್ದರೆ ಪೊಲೀಸರಿಗೆ ದೂರು ನೀಡಬೇಕಿತ್ತು. ಅದನ್ನು ಬಿಟ್ಟು ಕೊಲೆ ಮಾಡುವ ಹಂತ ತಲುಪಿದ್ದು ಖಂಡನೀಯ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಮೆಸೆಜ್ ವಿಚಾರವಾಗಿ ಒಂದು ಕ್ಷುಲ್ಲಕ ಕಾರಣಕ್ಕೆ ನಟ ದರ್ಶನ್ ಹೀಗೆ ಮಾಡಿದ್ದು ಇಡೀ ಚಿಂತ್ರರಂಗಕ್ಕೆ ಕಳಂಕ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಗಬೇಕು ಎಂದು ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ಕೆಟ್ಟದಾಗಿ ಮೆಸೆಜ್ ಮಾಡುವುದು ಇಂತಹ ಸಾವಿರಾರು, ಕೋಟ್ಯಂತರ ಘಟನೆಗಳು ನಡೆಯುತ್ತಿವೆ. ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಲು ಹೋಗುತ್ತಾರೆ ಎಂದರೆ ಸಾವಿರಾರು ಜನರ ಕೊಲೆ ಮಾಡಬೇಕಾಗುತ್ತದೆ. ಕಾನೂನು ಇದೆ, ಪೊಲೀಸರಿದ್ದಾರೆ ದೂರು ನೀಡುವುದು ಬಿಟ್ಟು ಕಾನೂನು ಕೆಗೆತ್ತಿಕೊಂಡಿದ್ದು ಸರಿಯಲ್ಲ. ಪ್ರಕರಣದ ಸಂಪೂರ್ಣ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು ಎಂದರು.
ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರ ನೆರವಾಗಬೇಕು. ಆತನ ಪತ್ನಿ 5 ತಿಂಗಳ ಗರ್ಭಿಣಿ. ಪತಿ ಸಾವಿನಿಂದ ಕಂಗೆಟ್ಟು ಕಣ್ಣಿರುಡಿತ್ತಿರುವುದು ನೋಡಿದರೆ ಕರುಳು ಕಿತ್ತುಬರುವಂತಿದೆ. ಜಿಲ್ಲಾಡಳಿತ, ರಾಜ್ಯ ಸರ್ಕಾರ ಆ ಹೆಣ್ಣುಮಗಳಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಪೊಲೀಸರು ಶಾಮಿಯಾನ ಹಾಕಿರುವ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಆರ್.ಅಶೋಕ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ಇದೆಯೇ? ಏನು ನಡೆಯುತ್ತಿದೆ? ಯಾವ ಉದ್ದೇಶಕ್ಕಾಗಿ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ್ದಾರೆ? ಗಲಾಟೆಯಾಗುತ್ತದೆ, ಅಭಿಮಾನಿಗಳು ಜಮಾವಣೆಗೊಳ್ಳಬಹುದು ಎನ್ನುವ ಕಾರಣವಿದ್ದರೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಅದಕ್ಕೆ ಪೊಲೀಸರು ಸಮರ್ಥರಿಲ್ಲವೇ? ಅದನ್ನು ಬಿಟ್ಟು ಶಾಮಿಯಾನ ಹಾಕಿರುವುದು ಇದು ಯಾವ ರೀತಿಯ ಕ್ರಮ? ಎಂದು ಗರಂ ಆದರು.