ಬೆಂಗಳೂರು: ರಾಜಭವನ ಒಂದು ರಾಜಕೀಯ ಪಕ್ಷದ ಕಚೇರಿಯಾಗಬಾರದು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಹಾಗಾದರೆ ವಿಧಾನಸೌಧ ಕಾಂಗ್ರೆಸ್ ಪಕ್ಷದ ಕಚೇರಿಯೇ? ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ರಾಜಭವನವನ್ನು ಬಿಜೆಪಿ ಕಚೇರಿ ಎನ್ನುವುದಾದರೆ ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಎನ್ನಬೇಕಾಗುತ್ತದೆ. ಆಡಳಿತ ನಡೆಸುತ್ತಿರುವ ಸರ್ಕಾರವೇ ಪ್ರತಿಭಟನೆ ನಡೆಸುತ್ತಿದೆ ಎಂದರೆ ಇದು ಸರ್ಕಾರದ ಸಂಪೂರ್ಣ ವೈಫಲ್ಯ ಎಂದು ಟೀಕಿಸಿದರು.
ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡು, ಅದರಂತೆ ಸರ್ಕಾರ ನಡೆಸಲಾಗುತ್ತಿದೆ ಎಂದರೆ ಒಪ್ಪಿಕೊಳ್ಳುತ್ತಾರಾ? ರಾಜಭವನ ಎಂದರೆ ಸಂವಿಧಾನದತ್ತ ಅಧಿಕಾರ. ರಾಜಭವನವನ್ನು ಬಿಜೆಪಿ ಕಚೇರಿ ಎಂದು ಆರೋಪಿಸುತ್ತಿದ್ದಾರೆ. ಹಾಗಾದರೆ ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಎಂದು ನಾವು ಹೇಳುತ್ತೇವೆ ಎಂದರು.
ರಾಜ್ಯಪಾಲರು ಪರಿಶೀಲಿಸಿ ತನಿಖೆಗೆ ಅನುಮತಿ ನೀಡಿದ್ದಾರೆ. 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೀಗೆ ನಡೆದಿದೆ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರ ವಿರುದ್ಧದ ತನಿಖೆಗೂ ಆಗಿನ ರಾಜ್ಯಪಾಲರು ಅನುಮತಿ ನೀಡಿದ್ದರು. ಆಗ ರಾಜಭವನ ಕಾಂಗ್ರೆಸ್ ಕಚೇರಿಯಾಗಿತ್ತೇ? ಕಾಂಗ್ರೆಸ್ ನಾಯಕರು ಕಿವಿಯ ಮೇಲೆ ಹೂ ಇಡುವುದನ್ನು ಬಿಟ್ಟು, ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿ ಎಂದರು.
ಸಿಎಂ ಸಿದ್ದರಾಮಯ್ಯ ಅವರ ಹಿಂದೆ ನಿಂತಿರುವ ಬಂಡೆಯನ್ನು ತಳ್ಳುವ ಶಕ್ತಿ ನಮಗಿಲ್ಲ. 136 ಶಾಸಕರಿದ್ದಾರೆ ಎಂದು ಅಹಂಕಾರದಿಂದ ಮೆರೆಯುವ ಕಾಂಗ್ರೆಸ್ ನಾಯಕರು, ಈ ಸರ್ಕಾರವನ್ನು ಬಿಜೆಪಿ ಬೀಳಿಸುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. 136 ಶಾಸಕರ ಮೇಲೆ ಸಿಎಂ ಸಿದ್ದರಾಮಯ್ಯನವರಿಗೆ ನಂಬಿಕೆ ಇಲ್ಲ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂದರು.