
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕರ್ನಾಟಕ ಕ್ರೈಂ ರಾಜ್ಯವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣವಿಲ್ಲದಾಗಿದೆ. ಕೊಲೆ, ಅತ್ಯಾಚಾರ, ಅಕ್ರಮ ಅವ್ಯಾಹತವಾಗಿ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟುಹೋಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೊಲೆಗೆಡುಕರಿಗೆ ಹಬ್ಬ. ಗೃಹ ಸಚಿವರ ಅಣತಿಯಂತೆ ಏನೂ ನಡೆಯುತ್ತಿಲ್ಲ. ಕಾರಣ ಗೃಹ ಇಲಾಖೆ ಪರಮೇಶ್ವರ್ ಕೈಯಲ್ಲಿ ಇಲ್ಲ, ಬೇರೆ ಯಾರದ್ದೋ ಕೈಯಲ್ಲಿದೆ. ಹೀಗಾಗಿ ಅವರು ಹೇಳಿದರೆ ಏನೂ ನಡೆಯಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೊಲೆಯಾಗಿದೆ. ಅಪರಾಧ ಕೃತ್ಯವೆಸಗುವವರಿಗೆ ಭಯವಿಲ್ಲದಾಗಿದೆ. ಭಯೋತ್ಪಾದಕರಿಗೆ, ಕೊಲೆಗೆಡುಕರಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.