ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯದಲ್ಲಿ ‘ಎಸ್’ ಸರ್ಕಾರವಿದೆ ಎಂದು ಕಿಡಿಕಾರಿದ್ದಾರೆ.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಕಲಬುರಗಿಯಲ್ಲಿ ಬಿಜೆಪಿ ನಾಯಕರ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ‘ಎಸ್’ ಸರ್ಕಾರವಿದೆ. ‘ಎಸ್’ ಅಂದ್ರೆ ಸೂಸೈಡ್, ‘ಎಸ್’ ಅಂದ್ರೆ ಸುಪಾರಿ. ‘ಎಸ್’ ಅಂದ್ರೆ ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 763 ಬಾಣಂತಿಯರ ಸಾವಾಗಿದೆ. ರೈತರ ಆತ್ಮಹತ್ಯೆಯಾಗುತ್ತಿದೆ. ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರ ಮೆಡಿಸನ್ ನಲ್ಲಿ ದುಡ್ಡು ಹೊಡೆದು ಔಷಧಿ ಸರಬರಾಜು ಮಾಡ್ತಿದೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ನಂತ್ರ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಎಲ್ಲಿದ್ದಾನೆ? ಆರೋಪಿ ರಾಜು ಕಪನೂರ್ ಎಲ್ಲಿ? ಎಂದು ಪ್ರಶ್ನಿಸಿದರು.
ಅಂದು ವಿಧಾನಪರಿಷತ್ ಘಟನೆಯಲ್ಲಿ ಸಭಾಪತಿಗಳು ಏನೂ ಆಗಿಲ್ಲ ಎಂದರೂ ಸಿ.ಟಿ.ರವಿಯನ್ನು ಬಂಧಿಸಿದರು. ಪ್ರತಿಪಕ್ಷಗಳನ್ನು ನಾಶಪಡಿಸುವ ಕೆಲಸ ನಡೆಯುತ್ತಿದೆ. ಇದೇ ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ಮಹಾರಾಷ್ಟ್ರದಲ್ಲಿ ಸೋಲಿಸಿದರು. ಸಚಿನ್ ಕುಟುಂಬಕ್ಕೆ ನ್ಯಾಯ ಕೊಡಿಸಲು ನಾವು ಕಲಬುರಗಿಗೆ ಬಂದಿದ್ದೇವೆ. ಈಶ್ವರಪ್ಪ ಪ್ರಕರನ್ದಲ್ಲಿ ಇದೇ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳಿದ್ದರು. ಈಶ್ವರಪ್ಪ ಆ ಕ್ಷಣ ಒಂದು ನಿಮಿಷ ಯೋಚಿಸದೇ ರಾಜೀನಾಮೆ ಕೊಟ್ಟರು. ಈಗ ಸಚಿವ ಪ್ರಿಯಾಂಕ್ ಖರ್ಗೆ ಕೂಡ ರಾಜೀನಾಮೆ ಕೊಡಬೇಕಲ್ವಾ? ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ. ಇದು ಕಮಿಷನ್ ಹೊಡೆಯುವ ಸರ್ಕಾರ. ತಾರತಮ್ಯ ನಡೆಯುವುದಿಲ್ಲ ಎಂಬುದನ್ನು ಪೊಲೀಸರಿ ಹೇಳಲು ಬಯಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.