ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಬಜನವರಿ 4 ರಂದು ಕಲಬುರ್ಗಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಹೋರಾಟ ನಡೆಯಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಮೃತ ಸಚಿನ್ ಅವರ ಡೆತ್ ನೋಟ್ ನಲ್ಲಿದೆ. ಸಚಿವರ ಆಪ್ತನೇ ಈ ಘಟನೆಗೆ ಕಾರಣ. ಆದರೆ ಎಐಸಿಸಿ ಅಧ್ಯಕ್ಷರ ಮಗನಾಗಿರುವುದರಿಂದ ಅವರ ರಾಜೀನಾಮೆ ಪಡೆಯದೆ ಸಿಎಂ ಸಿದ್ದರಾಮಯ್ಯ ಗಡಗಡ ನಡುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ನಡೆಯುತ್ತಿದೆ. ಸರ್ಕಾರದ ಒತ್ತಡ ತಾಳಲಾಗದೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದು ಕೊಲೆಗಡುಕ ಸರ್ಕಾರವಾಗಿದೆ ಎಂದು ಕಿಡಿಕಾರಿದರು.
ಗೋ ರಕ್ಷಣೆ ಎನ್ನುವುದು ಭಾರತದ ಸಂಸ್ಕೃತಿ. ಇದಕ್ಕಾಗಿ ಬಿಜೆಪಿ ಸರ್ಕಾರ ಯೋಜನೆ ರೂಪಿಸಿತ್ತು. ಈಗಿನ ಪಾಪರ್ ಸರ್ಕಾರ ಗೋವಿನ ಅನ್ನಕ್ಕೂ ಕನ್ನ ಹಾಕಿದೆ ಎಂದು ದೂರಿದರು.