ಬೆಂಗಳೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ವಸತಿ, ವಾಣಿಜ್ಯ ಚಟುವಟಿಕೆಗೆ ಬಳಸಿಕೊಳ್ಳಲು ಇರುವ ಭೂ ಪರಿವರ್ತನೆ ವ್ಯವಸ್ಥೆಯನ್ನೇ ರದ್ದು ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಭಾರಿ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಭೂ ಪರಿವರ್ತನೆ ವ್ಯವಸ್ಥೆಯನ್ನು ರದ್ದು ಮಾಡಿ ಪರ್ಯಾಯ, ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಮಾಡಲು ಅರ್ಜಿ ಸಲ್ಲಿಕೆಯ ಜೊತೆಗೆ ಮೂವತ್ತಕ್ಕೂ ಹೆಚ್ಚು ದಾಖಲೆಗಳನ್ನು ಸಲ್ಲಿಸಬೇಕಿದೆ. ಆನ್ಲೈನ್ ವ್ಯವಸ್ಥೆ ಇದ್ದರೂ ಕೂಡ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಅರ್ಜಿದಾರರಿಗೆ ಭೂ ಪರಿವರ್ತನೆಯಾದರೆ ಹೆಚ್ಚು ಲಾಭ ಸಿಗುತ್ತದೆ ಎನ್ನುವ ಕಾರಣಕ್ಕೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಾರೆ. ಅಲ್ಲದೆ, ಕಮಿಷನ್, ಹಣ ಪಡೆದು ಭ್ರಷ್ಟಾಚಾರಕ್ಕೆ ಕೂಡ ಕಾರಣವಾಗುತ್ತದೆ ಎಂಬುದನ್ನು ಮನಗಂಡು ಕೃಷಿ ಜಮೀನನ್ನು ಕೃಷಿಯೇತರ ವಸತಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡಲು ಭೂ ಪರಿವರ್ತನೆ ಮಾಡುವ ವ್ಯವಸ್ಥೆಯನ್ನು ರದ್ದು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.