ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ನಡೆದಿರುವ ಅಕ್ರಮ ಖಂಡಿಸಿ ವಿಪಕ್ಷ ಬಿಜೆಪಿ ಮೈಸೂರು ಚಲೋ ಬೃಹತ್ ಪ್ರತಿಭಟನೆ ಆರಂಭಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲು ವಿಪಕ್ಷ ನಾಯಕ ಆರ್.ಅಶೋಕ್ ಪೊಲೀಸರ ಕಣ್ತಪ್ಪಿಸಿ ಗೂಡ್ಸ್ ಆಟೊದಲ್ಲಿ ಆಗಮಿಸಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಮುನಿರತ್ನ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಕೆಂಗೇರಿ ಬಳಿ ತಡೆದು, ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಮೈಸೂರಿನಲ್ಲಿ ಮುಡಾ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇದೇ ವೇಳೆ ಪ್ರತಿಭಟನೆಗೆ ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಅರ್ಧದಲ್ಲೇ ತಡೆಯುತ್ತಿರುವ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಪೊಲೀಸರ ಕಣ್ತಪ್ಪಿಸಿ ಗೂಡ್ಸ್ ಆಟೋದಲ್ಲಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದಾರೆ. ಆರ್.ಅಶೋಕ್ ಗೆ ಮಾಜಿ ಸಚಿವ ಅಶ್ವತ್ಥನಾರಾಯಣ ಸಾಥ್ ನೀಡಿದ್ದಾರೆ. ಇಬ್ಬರು ನಾಯಕರು ಗೂಡ್ಸ್ ಆಟೋದಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರನ್ನು ವಶಕ್ಕೆ ಪಡೆಯುವ ಮೂಲಕ ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಯತ್ನ ನಡೆಸಿದೆ. ಹಾಗಾಗಿ ಪೊಲೀಸರ ಕಣ್ತಪ್ಪಿಸಿ ನಾವು ಗೂಡ್ಸ್ ಆಟೋದಲ್ಲಿ ಬಂದು ಧರಣಿ ನಡೆಸುತ್ತಿದ್ದೇವೆ. ಮೂಡಾದಲ್ಲಿ 4-5 ಸಾವಿರ ಕೋಟಿ ಅಕ್ರಮ ನಡೆದಿದೆ. ಜನಸಾಮಾನ್ಯರಿಗೆ ನಿವೇಶನ ನೀಡುವ ಬದಲು ಸಿಎಂ ಸಿದ್ದರಾಮಯ್ಯ ಕುಟುಂಬದವರಿಗೆ, ಆಪ್ತರಿಗೆ ಸೈಟ್ ಹಂಚಿಕೆಯಾಗಿದೆ. ಅಕ್ರಮದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.