ಬೆಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಆಡಳಿತದ ದಿನಗಳ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಅಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ ಮಾಡಿದ ಕಾಂಗ್ರೆಸ್ ಜನರ ಕ್ಷಮೆ ಕೇಳಬೇಕು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ತಲೆಬಾಗಿ ನಿಂತು ಜನರ ಬಳಿ ಕ್ಷಮೆಯಾಚಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿಯಿಂದ ನಡೆದ, ತುರ್ತು ಪರಿಸ್ಥಿತಿ ಸಂಬಂಧ ರಾಹುಲ್ ಗಾಂಧಿ ಕ್ಷಮೆ ಕೋರಬೇಕೆಂಬ ಪೋಸ್ಟರ್ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ್, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಮೂಲೆಗೆ ತಳ್ಳಿ ಸರ್ವಾಧಿಕಾರಿ ಧೋರಣೆ ತೋರಿದ ಕಾಂಗ್ರೆಸ್ ಪಕ್ಷ ಹಾಗೂ ಇಂದಿರಾಗಾಂಧಿ ರಾತ್ರೋರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ನ್ಯಾಯಾಂಗ ವ್ಯವಸ್ಥೆಯನ್ನು ಕಪಿಮುಷ್ಟಿಗೆ ತೆಗೆದುಕೊಂಡು, ಪತ್ರಕರ್ತರನ್ನು ಜೈಲಿಗೆ ಹಾಕಿದ್ದರು. ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ಘಟಾನುಘಟಿ ರಾಜಕೀಯ ನಾಯಕರನ್ನು ಜೈಲಿಗೆ ತಳ್ಳಿದ್ದರು. ಆಗ ನಾನು ವಿವಿ ಪುರ ಕಾಲೇಜಿನಲ್ಲಿ ಮೊದಲ ಪಿಯುಸಿ ಓದುತ್ತಿದ್ದೆ. ಯಶವಂತಪುರ ಸರ್ಕಲ್‌ನಲ್ಲಿ ಆರ್‌ಎಸ್‌ಎಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಇಂದಿರಾಗಾಂಧಿ ವಿರುದ್ಧ ಎರಡು ವಾಕ್ಯ ಘೋಷಣೆ ಕೂಗಿದ್ದೆ. ಆಗ ಯಶವಂತಪುರ ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದ್ದರು ಕಿಡಿಕಾರಿದರು.
ನಮ್ಮ ಇಡೀ ಕುಟುಂಬದಲ್ಲಿ ಆರ್‌ಎಸ್‌ಎಸ್‌ನವರೇ ಇದ್ದರು. ಅವರು ಕೂಡ ತಲೆಮರೆಸಿಕೊಳ್ಳಬೇಕಾಯಿತು. ನಾನು ಒಂದು ತಿಂಗಳು ಸ್ವಾತಂತ್ರ್ಯ ಉದ್ಯಾನದ ಜೈಲಿನಲ್ಲಿದ್ದೆ. 200 ಜನರಿಗೆ ಒಂದು ಶೌಚಾಲಯವಿತ್ತು. ಊಟ ಕೂಡ ಕೊಡದೇ ಚಿತ್ರಹಿಂಸೆ ನೀಡುತ್ತಿದ್ದರು. ಆ ಕಷ್ಟದ ದಿನಗಳು ಈಗಲೂ ನೆನಪಿನಲ್ಲಿದೆ. ಜನರಿಗೆ ಅಷ್ಟು ಕಿರುಕುಳ ನೀಡಿದ ಕಾಂಗ್ರೆಸ್ ಈಗ ಅಧಿಕಾರದಲ್ಲಿದೆ. ಸಂವಿಧಾನಕ್ಕೆ ಅಪಮಾನ ಮಾಡಿದ ಕಾಂಗ್ರೆಸ್ ಈಗ ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗುತ್ತಿದೆ? ಕಾಂಗ್ರೆಸ್ ನಾಯಕರು ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.