ಬೆಂಗಳೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ -ಕಂದಾಯ ಇಲಾಖೆ ಎಂಬ ಗ್ರಾಮ ವಾಸ್ತವ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ನಮ್ಮ ಹಾಗೂ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಂದಾಯ ಸಚಿವರಾದ ಆರ್. ಆಶೋಕ್ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಹಳ್ಳಿಗಳಿಗೆ ಭೇಟಿ ನೀಡಿದಾಗ ಅಲ್ಲಿರುವ ಸಮಸ್ಯೆಗಳನ್ನು ಅರಿತು ಸೂಕ್ತ ಪರಿಹಾರಗಳನ್ನು ನೀಡಬೇಕು ಎಂದು ಹೇಳಿದರು.
ಫೆ.20 ರಂದು ಗ್ರಾಮ ವಾಸ್ತವ್ಯ ನಡೆಯಲಿದ್ದು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರು ತಾಲ್ಲೂಕುವಾರು ನಡೆಸಲಿರುವ ಗ್ರಾಮ ವಾಸ್ತವ್ಯಗಳಿಗೆ ಭೇಟಿ ನೀಡಬೇಕು ಹಾಗೂ ಜಿಲ್ಲಾಧಿಕಾರಿಗಳು ಭೇಟಿ ನೀಡುವ ಗ್ರಾಮ ಹೊರತುಪಡಿಸಿ ಬೇರೆ ಗ್ರಾಮಗಳಿಗೆ ಆಯಾ ತಾಲ್ಲೂಕಿನ ತಹಶೀಲ್ದಾರ್‍ಗಳು ಗ್ರಾಮ ವಾಸ್ತವ್ಯ ಹೂಡಿ ಜನರ ಕುಂದು ಕೊರತೆಗಳನ್ನು ಬಗೆಹರಿಸುವುದು ಹಾಗೂ ಹೆಚ್ಚಿನ ಆದ್ಯತೆ ನೀಡಿ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಿಳಿಸಿದ್ದಾರೆ.
ಮುಖ್ಯವಾಗಿ ಕಂದಾಯ ಇಲಾಖೆ ವ್ಯಾಪ್ತಿಗೆ ಸಂಬಂದಿಸಿದ ಭೂಮಿ ದಾಖಲೆಗಳು, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳು, ಪಡಿತರ ವಿತರಣೆ, ಬೆಳೆ ಹಾನಿ, ವಸತಿ, ಸ್ಮಶಾನ ಭೂಮಿ, ಮತ್ತಿತರ ವಿಷಯಗಳ ಕುರಿತು ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ವಿಲೇವಾರಿಗೆ ಕ್ರಮವಹಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳು, ಸರ್ಕಾರಿ ಶಾಲೆಗಳು, ಹಾಗೂ ಎಸ್.ಸಿ ಎಸ್.ಟಿ ವಸತಿ ನಿಲಯಗಳಿಗೆ ಭೇಟಿ ನೀಡಬೇಕು ಹಾಗೂ ಅರ್ಹ ಬಡ ಕುಂಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡಬೇಕು ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಸ್ಥಳೀಯ ಬೇಡಿಕೆಗಳಿದ್ದಲ್ಲಿ ಆಯಾ ಇಲಾಖೆಯಿಂದಲೇ ಸೂಕ್ತ ಪರಿಹಾರ ನೀಡಬೇಕು ಹಣಕಾಸಿನ ಅವಶ್ಯಕತೆಯಿದ್ದಲ್ಲಿ ಸೂಚನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಜನರ ಬಾಗಿಲಿಗೆ ಸರ್ಕಾರವೇ ಹೋಗಿ ಜನರ ಸಮಸ್ಯೆಗಳನ್ನು ಆಲಿಸಿ ಅಲ್ಲೇ ಬಗೆಹರಿಸಬೇಕು ಹಾಗೂ ಕೇವಲ ವಿಸಿಟಿಂಗ್ ಅಧಿಕಾರಿಗಳಂತೆ ಹಳ್ಳಿಗೆ ಹೋಗಬಾರದು ಜನರ ದೃಷ್ಠಿಯಲ್ಲಿ ಜಿಲ್ಲಾಧಿಕಾರಿಯವರು ನಮ್ಮವರು ಎಂಬ ಭಾವನೆಗಳು ಉಂಟಾಗಬೇಕು ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಕಾರ್ಯವಾಗಬೇಕು ಎಂದ ಸಚಿವರು ಗ್ರಾಮ ವಾಸ್ತವ್ಯ ಹೂಡುವಾಗ ಹೆಚ್ಚಿನ ದುಂದುವೆಚ್ಚ ಮಾಡಬಾರದು ಎಂದು ತಿಳಿಸಿದರು.
ಗ್ರಾಮವಾಸ್ತವ್ಯ ಮಾಡುವಾಗ ಆ ವ್ಯಾಪ್ತಿಯವರಿಗೆ ಮಾತ್ರ ಆದ್ಯತೆಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಜಾಗಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆರ್. ಆಶೋಕ್ ಸೂಚಿಸಿದರು. ಜನರಿಗೆ ಸರ್ಕಾರದ ಸವಲತ್ತುಗಳನ್ನು ನೀಡಬೇಕು , ಕೆ2, ಆಧಾರ್ ಸೀಡಿಂಗ್ ಬಾಕಿ ಇರುವ ಅರ್ಜಿಗಳನ್ನು ಮುಕ್ತಾಯಗೊಳಿಸಬೇಕು. ಕಂದಾಯ ಗ್ರಾಮಗಳನ್ನು ಗುರುತಿಸಬೇಕು ಹಾಗೂ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.