ಬೆಂಗಳೂರು: ಆಲ್ ಇಂಡಿಯಾದ ಎಲ್ಲಾ ಚಾನಲ್ ಗಳಲ್ಲೂ ಹೆಳುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನಸ್ಸಿನ ಒಳಗೊಂದು, ಹೊರಗೊಂದು ಎಂದು. ಈ ಬಗ್ಗೆ ಎಲ್ಲಾ ಕಡೆಯೂ ಚರ್ಚೆಯಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಸಿಎಂ ಕುರ್ಚಿಗಾಗಿ ಸರ್ಕಾರದಲ್ಲೇ ಕಿತ್ತಾಟ ನಡೆಯುತ್ತಿದೆ. ಈಗಾಗಲೇ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಾನು ಸನ್ಯಾಸಿಯಲ್ಲ, ಸಿಎಂ ಆಗಬೇಕು ಎಂದು. ಪದೇ ಪದೇ ಈ ಮಾತು ಹೇಳಿದ್ದಾರೆ. ಅಷ್ಟೇ ಅಲ್ಲ, ಅವರ ಸ್ವಾಮೀಜಿ ಅಜ್ಜಯ್ಯ ಸ್ವಾಮೀಜಿ ಕೂಡ ಡಿಸೆಂಬರ್ ಒಳಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ ಎಂದು ಹೇಳಿದ್ದಾರೆ….ಅದೆಲ್ಲವೂ ಅವರ ಪಕ್ಷದ ಆತಂತರಿಕ ವಿಷಯ ಬಿಡಿ…. ಡಿಕೆಶಿಯವರನ್ನು ಸಿಎಂ ಮಾಡ್ಬೇಕೋ, ಖರ್ಗೆ ಅವರನ್ನು ಮಾಡಬೇಕೋ, ಪರಮೇಶ್ವರ್ , ಎಂ.ಬಿ.ಪಾಟೀಲ್ ಅವರನ್ನು ಮಾಡಬೇಕೋ ಅಂಬುದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಬಿಟ್ಟಿದ್ದು ಎಂದರು.
ನಮ್ಮ ಹೋರಾಟದ ಫಲವಾಗಿ ಈಗಾಗಲೇ ಸರ್ಕಾರದ ಒಂದು ಮಂತ್ರಿ ವಿಕೆಟ್ ಬಿದ್ದಿದೆ. ಈಗ ಮತ್ತೊಂದು ವಿಕೆಟ್ ಬೀಳಬೇಕು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಹಿಂದೆ ಯಡಿಯೂರಪ್ಪ ಹೇಗೆ ರಾಜೀನಾಮೆ ಕೊಟ್ಟರೋ ಅದೇ ರೀತಿ ಈಗ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಹೇಳಿದರು.