ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ರಾಜ್ಯದ ಜನತೆಗೆ ಬರಿ ಬೆಲೆ ಏರಿಕೆ ಭಾಗ್ಯ ಕೊಟ್ಟಿದೆ. ಹಾಲು, ಮನೆ ತೆರಿಗೆ, ಮದ್ಯ, ಸ್ಟ್ಯಾಂಪ್ ಡ್ಯೂಟಿ ಶುಲ್ಕ ಈಗ ಪೆಟ್ರೋಲ್ ಡೀಸೆಲ್ ಬೆಲೆಯನ್ನು ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡುವ ಮೂಲಕ ಬರೆ ಎಳೆದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಆರ್.ಅಶೋಕ್, ರಾಜ್ಯ ಸರ್ಕಾರ ಜನರಿಗೆ ದೌರ್ಭಾಗ್ಯವನ್ನು ಕೊಟ್ಟಿದೆ. ಬೆಲೆ ಏರಿಕೆ ಮಾಡುವ ಮೂಲಕ ಬಡ ಜನರಿಗೆ ದೊಡ್ಡ ಹೊಡೆತ ಕೊಟ್ಟಿದೆ. ಬಿಜೆಪಿ ಅವಧಿಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದ್ದಕ್ಕೆ ಶವ ಯಾತ್ರೆ ಮಾಡುವ ಮೂಲಕ ಸಿದ್ದರಾಮಯ್ಯ ಹೋರಾಟ ಮಾಡಿದ್ದರು. ಆದರೆ ಈಗ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿರುವುದು ಏನು? ಎಂದು ಪ್ರಶ್ನಿಸಿದರು.
ಅಗತ್ಯ ವಸ್ತುಗಳ ಬೆಲೆ ಹಾಲು, ಹಣ್ಣು, ತರಕಾರಿ ಪೆಟ್ರೋಲ್, ಡೀಸೆಲ್ ಎಲ್ಲದರ ಬೆಲೆಯೂ ಏರಿಕೆಯಾಗಿದೆ. ಜನ ಟೀ, ಕಾಫಿ ಕುಡಿಯಲು ಆಗದ ಸ್ಥಿತಿ ಇದೆ. ಆರ್.ಅಶೋಕ್ ಗೆ ಜ್ಞಾನ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಸಿಎಂ ಸಿದ್ದರಾಮಯ್ಯನವರೆ ನಿಮಗೆ ಜ್ಞಾನ ಇದೆಯಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಲೆ ಏರಿಕೆ ಬಗ್ಗೆ ಎಲ್ಲರೂ ಬಾಯಿಮುಚ್ಚಿಕೊಂಡು ಇರಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಶಾಸಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಇರಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸಲಿದ್ದಾರೆ. ಕಾಂಗ್ರೆಸ್ ಗೆ ಜನರು ಚೊಂಬು ಕೊಡುವುದು ಗ್ಯಾರಂಟಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ 15 ಬಾರಿ ಬಜೆಟ್ ಮಂಡನೆ ಮಾಡಿ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಸರ್ಕಾರ ಬಿಡಿಎ ಮಾರಾಟ ಮಾಡಲು ಹೊರಟಿದೆ. ಬಿಬಿಎಂಪಿ ಕಚೇರಿ, ವಾರ್ಡ್ ಕಚೇರಿಗಳನ್ನು ಅಡ ಇಡುತ್ತಿದ್ದಾರೆ. ಸಿದ್ದರಾಮಯ್ಯ ವಿಧಾನಸೌಧವನ್ನೂ ಅಡಮಾನ ಇಡುತ್ತಾರೆ. ಅವರು ಔಟ್ ಗೋಯಿಂಗ್ ಮುಖ್ಯಮಂತ್ರಿ ಹಾಗಾಗಿ ವಿಧಾನಸೌಧ ಅಡ ಇಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.