ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಮೈತ್ರಿ ಅಭ್ಯರ್ಥಿ ಬಗ್ಗೆ ಚರ್ಚೆ ನಡೆದಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆ ಈಗಾಗಲೇ ಮಾತುಕತೆ ನಡೆದಿದ್ದು, ಅವರು ಓಪನ್ ಮೈಂಡ್ ನಲ್ಲಿದ್ದಾರೆ. ಅಭ್ಯರ್ಥಿ ಯಾರೇ ಆಗಲಿ ನಾವು ಗೆಲ್ಲಬೇಕು ಎಂದಿದ್ದಾರೆ ಎಂದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಆರ್.ಅಶೋಕ್, ಕಳೆದ 20 ವರ್ಷಗಳಿಂದ ಚನ್ನಪಟ್ಟಣಕ್ಕೆ ಹೋಗದವರು ಈಗ ಭೇಟಿ ಕೊಟ್ಟು ನಾಟಕ ಮಾಡ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಂದಿದ್ದು 20 ಸಾವಿರ ಮತ. ಬಿಜೆಪಿ-ಜೆಡಿಎಸ್ ಒಂದು ಲಕ್ಷಕ್ಕೂ ಅಧಿಕ ಮತ ಬಂದಿದೆ. 20 ಸಾವಿರ ಮತ ಬಂದಿದ್ದಕ್ಕೆ ಈಗ ಅಲ್ಲಿಗೆ ಹೋಗಿ ನಮಸ್ಕಾರ ಹಾಕ್ತಿದ್ದಾರಂತೆ. ಎಷ್ಟು ನಮಸ್ಕಾರ ಹಾಕ್ತಾರೆ ಹಾಕಲಿ ಎಂದು ವ್ಯಂಗ್ಯವಾಡಿದರು.
ಬೆಲೆ ಏರಿಕೆ ಮಡಿರುವುದರಿಂದ ಬೈ ಎಲೆಕ್ಷನ್ ನಲ್ಲಿ ಜನ ಕಾಂಗ್ರೆಸ್ ಗೆ ಬುದ್ಧಿ ಕಲಿಸಲಿದ್ದಾರೆ. ಚನ್ನಪಟ್ಟಣದಲ್ಲಿ ಎದುರಾಳಿ ಯಾರೇ ಆಗಿರಲಿ ಗೆಲುವು ಮಾತ್ರ ನಮ್ಮದೇ ಎಂದು ಹೇಳಿದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸರ್ಕಾರ ಜನರ ಬಗ್ಗೆ ಗಮನ ಹರಿಸುತ್ತಿಲ್ಲ. ಪೆಟ್ರೋಲ್, ಡೀಸೆಲ್, ಹಾಲು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಸರ್ಕಾರಕ್ಕೆ ಜನ ಸ್ವಲ್ಪ ಶಾಕ್ ಟ್ರೀಟ್ ಮೆಂಟ್ ಕೊಡಬೇಕು. ಆಗ ಅವರು ಜನರ ಕಡೆ ಸ್ವಲ್ಪ ತಿರುಗಿ ನೋಡ್ತಾರೆ ಎಂದು ವಾಗ್ದಾಳಿ ನಡೆಸಿದರು.