
ಬೆಂಗಳೂರು: ಬಜೆಟ್ ಅಧಿವೇಶನದ ಮೊದಲ ದಿನವೇ ರಾಜ್ಯ ಸರ್ಕಾರಾಕ್ಕೆ ವಿಪಕ್ಷ ಬಿಜೆಪಿಯಿಂದ ಪ್ರತಿಭಟನೆಯ ಬಿಸಿ ತಟ್ಟಿದೆ. ಜ್ಯಪಾಲರಿಗೆ ನಿರಂತರವಾಗಿ ಅಪಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಬಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ರಾಜ್ಯಪಾಲರಿಗೆ ನಿರಂತರವಾಗಿ ಅಪಮಾನ ಮಾಡುತ್ತಿದೆ. ಒಂದು ಕಡೆ ಅಪಮಾನ ಮಾಡಿದರೆ, ಮತ್ತೊಂದು ಕಡೆ ಅವರಿಂದಲೇ ಸರ್ಕಾರಕ್ಕೆ ಮೆಚ್ಚುಗೆ ಹೇಳುವ ಮಾತನ್ನು ಆಡಿಸಲಾಗುತ್ತಿದೆ. ರಾಜ್ಯಪಾಲರು ಕೇಳುವ ಯಾವುದೇ ಸ್ಪಷ್ಟನೆಗೆ ಉತ್ತರ ನೀಡುತ್ತಿಲ್ಲ. ಸರ್ಕಾರದ ಈ ಧೋರಣೆ ವಿರೋಧಿಸಿ ಬಿಜೆಪಿಯಿಂದ ಪ್ರಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತುಹೋಗಿವೆ. ಕಾಂಗ್ರೆಸ್ ಶಾಸಕರೇ ಈ ಮಾತನ್ನು ಹೇಳುತ್ತಿದ್ದಾರೆ. ಇದರ ಜೊತೆಗೆ ಹಣ ಇಲ್ಲದೆ ಒಂದು ಲಕ್ಷ ಕೋಟಿ ರೂ.ಸಾಲ ಮಾಡಲಾಗುತ್ತಿದೆ. ಜನರ ಮೇಲೆ ತೆರಿಗೆ ಹೊರೆ ಹೇರಲಾಗುತ್ತಿದೆ. ಇದನ್ನು ಖಂಡಿಸಿ ಮಾರ್ಚ್ 7 ರಂದು ಶಾಸಕರ ಭವನದಿಂದ ವಿಧಾನಸೌಧಕ್ಕೆ ಪಾದಯಾತ್ರೆ ಹಾಗೂ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯನವರ ಸರ್ಕಾರ ದಲಿತರ ಹಣವನ್ನು ಗ್ಯಾರಂಟಿಗೆ ಬಳಸಿದೆ. ದಲಿತರ ಹಣವನ್ನು ದಲಿತರಿಗೆ ಸಂಬಂಧಿಸಿದ ಯೋಜನೆಗಳಿಗೆ ಮಾತ್ರ ಬಳಸಬೇಕು. ಚುನಾವಣೆ ಸಮಯದಲ್ಲಿ ಎಲ್ಲರಿಗೂ ಫ್ರೀ ಎಂದು ಹೇಳಿ, ಈಗ ದಲಿತರ ಹಣ ಬಳಸಲಾಗುತ್ತಿದೆ. ಬಿಜೆಪಿಯ 40% ಕಮಿಷನ್ ಹಣ ಉಳಿಸಿ ಗ್ಯಾರಂಟಿಗೆ ಬಳಸಲಾಗುವುದು ಎನ್ನಲಾಗಿತ್ತು. ಈಗ ಗುತ್ತಿಗೆದಾರರೇ ಕಾಂಗ್ರೆಸ್ ಸರ್ಕಾರದ ಕಮಿಷನ್ ಬಗ್ಗೆ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.