ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆ ಆರಂಭವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ-ಜೆಡಿಎಸ್ ಪಾದಯಾತ್ರೆ ವೇಳೆ ಮೈಸೂರು ಚಲೋ ಸಮಾವೇಶದಲ್ಲಿ ಮಾತನಾಡಿದ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯನವರೇ, ರಾಜ್ಯಪಾಲರು ನೀಡಿದ ಬರೀ ನೋಟಿಸ್ ಗೆ ಗಡಗಡ ನಡುಗುತ್ತಿದ್ದೀರಾ. ಇನ್ನೂ ಅನುಮತಿ ಕೊಟ್ಟರೆ ನಿಮ್ಮ ಕತೆ ಏನಾಗಬಹುದು? ಎಂದು ವ್ಯಂಗ್ಯವಾಡಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ದೊಡ್ಡ ಹೋರಾಟವಿದು. ಕರ್ನಾಟಕದ ಇತಿಹಾಸದಲ್ಲಿಯೇ ಹಿಂದೆಂದು ನಡೆಯದ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸುತ್ತಿದ್ದೇವೆ. ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರ, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗಾಗಿ ನಮ್ಮ ಹೋರಾಟ ಎಂದು ಹೇಳಿದರು.