ಬೆಂಗಳೂರು: ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನವರ ವಿರುದ್ಧ ಈಗ 15% ಕಮಿಷನ್ ಆರೋಪ ಕೇಳಿಬರುತ್ತಿದೆ. ಇದಕ್ಕೆ ಕಾಂಗ್ರೆಸ್ ನಾಯಕರ ಉತ್ತರವೇನು ಎಂದು ಮಾಜಿ ಸಚಿವ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಬಿಬಿಎಪಿಂ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ನೀವು ಕಮಿಷನ್ ಕೇಳಿಲ್ಲ ಎನ್ನುವುದಾದರೆ ಗುತ್ತಿಗೆದಾರರು ಅಜ್ಜಯ್ಯನ ದೇವಸ್ಥಾನಕ್ಕೆ ಹೋಗಿ ಆಣೆ ಮಾಡಿ ಎಂದು ಸವಾಲು ಹಾಕಿದ್ದಾರೆ. ಈ ಸವಾಲನ್ನು ಒಪ್ಪಿಕೊಂಡಿಲ್ಲ ಯಾಕೆ?
ಕಮಿಷನ್ ದಂಧೆ ಶುರುಮಾಡಿದ್ದು ಲೋಕಸಭಾ ಚುನಾವಣೆ ಫಂಡ್ ಸಂಗ್ರಹಕ್ಕಾ?
ಗುತ್ತಿಗೆದಾರರ ಹಿತಾಸಕ್ತಿ ಕಾಪಾಡುವುದಾಗಿ ಮಾತು ಕೊಟ್ಟು ಅಧಿಕಾರಕ್ಕೆ ಬಂದ ನೀವು ಈಗ ಅವರನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಯಾಕೆ?
ಬಿಬಿಎಂಪಿ 2019-23ರವರೆಗಿನ ಕಾಮಗಾರಿಗಳನ್ನು ಮಾತ್ರ ತನಿಖೆ ನಡೆಸುತ್ತಿದ್ದೀರಿ. ಒಂದು ವೇಳೆ ನೀವು ಪ್ರಾಮಾಣಿಕವಾಗಿದ್ದರೆ 2013ರಿಂದಲೂ ತನಿಖೆ ಮಾಡಬಹುದಲ್ಲಾ?
ಒಂದು ವೇಳೆ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸುವುದಾಗಿ ಹೇಳಿದರೆ ನಿಮ್ಮ ಬ್ರ್ಯಾಂಡ್ ಬೆಂಗಳೂರು ಕಾಮಗಾರಿ ಕಥೆ ಏನು?
300 ಗುತ್ತಿಗೆದಾರರು ದಯಾಮರಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಕಾಂಗ್ರೆಸ್ ಉತ್ತರವೇನು?
ದೆಹಲಿಯಲ್ಲಿ ಮಂತ್ರಿಗಳನ್ನು ಕರೆಸಿ ಸಭೆ ಮಾಡಿದ್ದು ಲೋಕಸಭಾ ಸೀಟ್ ಗೆಲ್ಲುವುದಕ್ಕೋ ಅಥವಾ ಸೂಟ್ ಕೇಸ್ ತುಂಬಿಕೊಳ್ಳಲೋ?
ಡಿ.ಕೆ.ಶಿವಕುಮಾರ್ ಅವರೇ ನಿಮ್ಮದು ಬ್ರ್ಯಾಂಡ್ ಬೆಂಗಳೂರೋ? ಬ್ಲಾಕ್ ಬೆಂಗಳೂರೋ?
ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಿದರೆ ಡಿಸಿಎಂ ತಡೆ ಹಿಡಿದಿದ್ದಾರೆ. ಹಾಗಾದರೆ ಹಣ ಬಿಡುಗಡೆ ಮಾಡಲು ಸಿಎಂ ಗೆ ವೇಣುಗೋಪಾಲ್ ಸೂಚನೆ ನೀಡಿದರೆ ಸುರ್ಜೇವಾಲಾ ತಡೆ ನೀಡಲು ಸೂಚನೆ ನೀಡಿದ್ರಾ? ಎಂದು ಪ್ರಶ್ನಿಸಿದ್ದಾರೆ.