ಬೆಂಗಳೂರು: ನೀರಿನ ದರ ಹೆಚ್ಚಳ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನ ದರ ಏರಿಕೆ ಮಾಡುವುದು ಅಪರಾಧ. ಸರ್ಕಾರದ ಬಳಿ ದುಡ್ಡಿಲ್ಲ ಎಂದು ಈ ರೀತಿ ಜನರಿಂದ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಸರ್ಕಾರ ಪಾಪರ್ ಆಗಿದೆ. ಯಾವುದಕ್ಕೂ ಸರ್ಕಾರದ ಬಳಿ ಹಣವಿಲ್ಲ. ಗ್ಯಾರಂಟಿ ಯೋಜನೆಗಳಿಗೆ ನೀಡಲೂ ಹಣವಿಲ್ಲ. ಸಂಬಳ ಕೊಡಲು ದುಡ್ಡಿಲ್ಲದ ಸ್ಥಿತಿ ಇದೆ. ಹಾಗಾಗಿ ಪ್ರತಿಯೊಂದರ ದರ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಪೆಟ್ರೋಲ್, ಡಿಸೆಲ್ ದರ ಏರಿಸಿದ್ದಾಯ್ತು, ಹಾಲಿನ ದರ ಏರಿಸಿದ್ದಾಯ್ತು, ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಈಗ ನೀರಿನ ದರ ಹೆಚ್ಚಿಸಲು ಸರ್ಕಾರ ಹೊರಟಿದೆ. ಇದನ್ನು ಖಂಡಿಸಿ ಬಿಜೆಪಿಯಿಂದ ಹೋರಾಟ ಮಾಡಲಿದೆ. ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.