ಬೆಂಗಳೂರು : ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು (Quiz Competition) ಹಮ್ಮಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2023-24ನೇ ಸಾಲಿನ ಯೋಜನಾ ಅನುಮೋದನಾ ಮಂಡಳಿಯಿಂದ “ರಾಷ್ಟ್ರೀಯ ಅವಿಷ್ಕಾರ್ ಅಭಿಯಾನ” ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲು ಪ್ರಾಥಮಿಕ ವಿಭಾಗಕ್ಕೆ ರೂ.35.00 ಲಕ್ಷಗಳು ಹಾಗೂ ಪ್ರೌಢಶಾಲಾ ವಿಭಾಗಕ್ಕೆ ರೂ.35.00 ಲಕ್ಷಗಳು ಒಟ್ಟು ರೂ.70.00 ಲಕ್ಷಗಳ ಅನುದಾನ ಅನುಮೋದನೆಯಾಗಿರುತ್ತದೆ.
ರಸಪ್ರಶ್ನೆ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸುವಂತಹ ಚಟುವಟಿಕೆಗಳನ್ನು ಮತ್ತು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಗಣಿತ, ವಿಜ್ಞಾನ, ತಂತ್ರಜ್ಞಾನ ಸಾಮಾನ್ಯ ಜ್ಞಾನ, ಭಾಷೆ, ಭಾರತ ದೇಶದ ಪರಂಪರೆ ಹಾಗೂ ಇತರೆ ವಿಷಯಗಳಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸಲು ಪೂರಕವಾಗಿದೆ.
ಉದ್ದೇಶಗಳು:
- ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸುವುದು.
- ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ಹಾಗೂ ಸಾಮಾನ್ಯ ಜ್ಞಾನವನ್ನು ಬೆಳೆಸುವುದು.
- ವಿದ್ಯಾರ್ಥಿಗಳಲ್ಲಿ ಚಿಂತಿಸುವ, ವಿಶ್ಲೇಷಿಸುವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು.
- ಭಾರತವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು.
- ವಿದ್ಯಾರ್ಥಿಗಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ, ಅವರಲ್ಲಿ ಸ್ಪರ್ಧಾಮನೋಭಾವನೆಯನ್ನು ಬೆಳೆಸುವುದು.