ನವದೆಹಲಿ: ಸಮನ್ಸ್ ನೀಡಿ ವಿಚಾರಣೆಗೆ ಕರೆಸಿದ ವ್ಯಕ್ತಿಗಳನ್ನು ಹೊತ್ತಲ್ಲದ ಹೊತ್ತಲ್ಲಿ ವಿಚಾರಣೆ ನಡೆಸಬಾರದು ಹಾಗೂ ಕಚೇರಿಗಳಲ್ಲಿ ಗಂಟೆಗಟ್ಟಲೆ ಕಾಯಿಸಬಾರದು ಎಂದು ತನಿಖಾಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ(ED) ಆದೇಶ ನೀಡಿದೆ.
ತಮ್ಮನ್ನು ವಿಚಾರಣೆಗೆ ಕರೆಸಿದ ಇಡಿ ಅಧಿಕಾರಿಗಳು ಇಡೀ ರಾತ್ರಿ ವಶದಲ್ಲಿರಿಸಿಕೊಂಡು ಪ್ರಶ್ನೆ ಕೇಳಿದ್ದರು. ಮಧ್ಯರಾತ್ರಿ ನಂತರ ಕಾಯಲು ಕೂರಿಸಿದ್ದರು ಎಂದು 64 ವರ್ಷದ ವ್ಯಕ್ತಿಯೊಬ್ಬರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು.
ಈ ರೀತಿ ತಡರಾತ್ರಿವರೆಗೆ ವಿಚಾರಣೆ ನಡೆಸಿ ಕಾಯಿಸುವುದರಿಂದ ವಿಚಾರಣೆಗೆ ಬಂದ ವ್ಯಕ್ತಿ ನಿದ್ರೆಯಿಂದ ವಂಚಿತರಾಗುತ್ತಾರೆ. ಅದು ಕನಿಷ್ಠ ಮಾನವೀಯ ವೈಯಕ್ತಿಕ ಹಕ್ಕು ಎಂದು ಬಾಂಬೆ ಹೈಕೋರ್ಟ್ ಹೇಳಿದ್ದು, ಈ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಂದು ಇಡಿ ಸುತ್ತೋಲೆ ಹೊರಡಿಸಿದೆ. ಸಮನ್ಸ್ ನೀಡಿ ವಿಚಾರಣೆಗೆ ಕರೆಸಿದ ವ್ಯಕ್ತಿಗಳನ್ನು ಹೊತ್ತಲ್ಲದ ಹೊತ್ತಲ್ಲಿ ವಿಚಾರಣೆ ನಡೆಸಬಾರದು. ವಿಚಾರಣೆಗೆ ಬಂದವರನ್ನು ಗಂಟೆಗಟ್ಟಲೆ ಕಾಯಿಸಬಾರದು ಎಂದು ಸೂಚಿಸಿದೆ.