ಕಲಬುರಗಿ: ಮದ್ಯ ತಯಾರಿಕೆಗೆ ಬಳಕೆ ಮಾಡುವ ಸ್ಪಿರಿಟ್ ಬೆಲೆ ನಿಯಂತ್ರಣಕ್ಕೆ ಸರ್ಕಾರದಿಂದ ಬೆಲೆ ನಿಯಂತ್ರಣ ಸಮಿತಿ ರಚಿಸಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.
ಕಲಬುರಗಿಯ ಅಬಕಾರಿ ಭವನದಲ್ಲಿ ಶುಕ್ರವಾರ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆ ಒಳಗೊಂಡ ವಿಭಾಗ ಮಟ್ಟದ ಅಬಕಾರಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮದ್ಯ ತಯಾರಿಕೆಗೆ ಬಳಸುವ ಸ್ಪಿರಿಟ್ ಅನ್ನು ಖಾಸಗಿ ಡಿಸ್ಟಿಲರಿಗಳು ತಮಗೆ ತೋಚಿದ ದರದಲ್ಲಿ ಮಾರಾಟ ಮಾಡುತ್ತಿದ್ದು, ಬೇರೆ ರಾಜ್ಯಕ್ಕೆ ಕಡಿಮೆ ದರಕ್ಕೆ ಮಾರಾಟ ಮಾಡಿ ಕರ್ನಾಟಕದಲ್ಲಿ ಹೆಚ್ಚಿನ ದರಕ್ಕೆ ಸ್ಪಿರಿಟ್ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರದಿಂದಲೇ ಬೆಲೆ ನಿಯಂತ್ರಣ ಸಮಿತಿ ರಚಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ಒಡಿಶಾದಲ್ಲಿ ಸ್ಪಿರಿಟ್ ಬೆಲೆ ನಿಯಂತ್ರಣ ಸಮಿತಿ ರಚನೆಯಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಸ್ಪಿರಿಟ್ ದರ ನಿಯಂತ್ರಣಕ್ಕೆ ಸಮಿತಿ ರಚಿಸಲಾಗುವುದು. ಇದರಿಂದ ಕಡಿಮೆ ಬೆಲೆಗೆ ಸ್ಪಿರಿಟ್ ದೊರೆಯುತ್ತದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ಗುಣಮಟ್ಟ ಮದ್ಯ ಒದಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.