ಬೆಂಗಳೂರು: ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿ ಟಿಕೆಟ್ ನೀಡುವ ವ್ಯವಸ್ಥೆ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಶೀಘ್ರವೇ ಆರಂಭವಾಗಲಿದೆ.
ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಮಷೀನ್ ಬಳಕೆಯನ್ನು ಪ್ರಾಯೋಗಿಕವಾಗಿ 150 ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಆರಂಭಿಸಲಿದ್ದು, ಸಾಧಕ ಬಾಧಕ ಪರಿಶೀಲಿಸಿದ ಬಳಿಕ ಎಲ್ಲಾ ಬಸ್ ಗಳ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಮಷೀನ್ ಬಳಕೆ ಮಾಡಲಾಗುವುದು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಬಿಎಂಟಿಸಿ ಕೆಲವು ಮಾರ್ಗಗಳಲ್ಲಿ ಯುಪಿಐ ತಂತ್ರಜ್ಞಾನದ ಮೂಲಕ ಟಿಕೆಟ್ ದರ ಪಾವತಿ ಪದ್ಧತಿ ಜಾರಿಯಲ್ಲಿದೆ. ಅದು ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ವ್ಯವಸ್ಥೆಯಲ್ಲ. ನಿರ್ವಾಹಕರು ಕುತ್ತಿಗೆಗೆ ಕ್ಯೂಆರ್ ಕೋಡ್ ಹಾಕಿಕೊಂಡಿರುತ್ತಾರೆ. ಅದನ್ನು ಸ್ಕ್ಯಾನ್ ಮಾಡಿ ಟಿಕೆಟ್ ದರ ಪಾವತಿಸಿದವರಿಗೆ ಟಿಕೆಟ್ ಕೊಡುತ್ತಾರೆ.
ಕೆಎಸ್ಆರ್ಟಿಸಿಯಲ್ಲಿ ಈ ಪದ್ಧತಿಯ ಬದಲಿಗೆ ಟಿಕೆಟ್ ಮಷೀನ್ ನಲ್ಲಿ ಕ್ಯೂಆರ್ ಕೋಡ್ ಒದಗಿಸುವ ತಂತ್ರಜ್ಞಾನ ಇರುತ್ತದೆ. ನಗದು ರಹಿತ ವ್ಯವಸ್ಥೆಗೆ ಒತ್ತು ನೀಡಲು ಕ್ರಮ ಕೈಗೊಳ್ಳಲಾಗಿದೆ. ಯುಪಿಐ ಬಳಕೆ ಈಗ ಎಲ್ಲಾ ಕಡೆ ಸಾಮಾನ್ಯವಾಗಿದ್ದು, ಕೆಎಸ್ಆರ್ಟಿಸಿ ಬಸ್ ಗಳಲ್ಲಿಯೂ ಈ ವ್ಯವಸ್ಥೆ ಜಾರಿಯಾದಲ್ಲಿ ಪ್ರಯಾಣಿಕರು ಯುಪಿಐ ಮೂಲಕವೇ ಟಿಕೆಟ್ ಹಣ ಪಾವತಿಸಲಿದ್ದಾರೆ.
ಮುಂದಿನ ವಾರ ಕೆಎಸ್ಆರ್ಟಿಸಿಯ 150 ಬಸ್ ಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಬಳಕೆ ಮಾಡಲಾಗುವುದು. ಸಾಧಕ –ಬಾಧಕ ಪರೀಕ್ಷಿಸಿದ ಬಳಿಕ ಎಲ್ಲಾ ಬಸ್ ಗಳಲ್ಲಿಯೂ ಇದನ್ನು ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.