ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ಹೆಬ್ಬಾವನ್ನು ಹಿಡಿದು ಪೆರ್ಲಂಪಾಡಿಯಲ್ಲಿರುವ ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಕಟ್ಟಿ ಕೊಂದು ಹಾಕಿದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಶೇಡಿಗುರಿ ನಿವಾಸಿ ಧನಂಜಯ(38) ಮತ್ತು ಗ್ರಾಪಂ ನೌಕರ ಜಯ(38) ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ.
ಕೊಳ್ತಿಗೆ ಗ್ರಾಮದಲ್ಲಿ ಮನೆ ಬಳಿ ಬಂದಿದ್ದ ಹೆಬ್ಬಾವನ್ನು ಹಿಡಿದು ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಕಟ್ಟಿ ಕೊಂದು ಹಾಕಿದ್ದರು. ಹೆಬ್ಬಾವನ್ನು ಕೊಲ್ಲುವುದು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಜಾಮೀನು ರಹಿತ ಅಪರಾಧವಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ಜುಲೈ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.