ಬೆಂಗಳೂರು: ಕೆಡಿಪಿ ಸಭೆಗೆ ಗೈರಾಗಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ ಘಟನೆ ನಡೆದಿದೆ.
ಬನಶಂಕರಿಯ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮೊದಲ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆಗೆ ಗೈರಾಗಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದರು.
ಅಧಿಕಾರಿ ಜನತಾದರ್ಶನ ಸಿದ್ಧತೆಗೆ ಹೋಗಿದ್ದಾಗಿ ಸಬೂಬು ನೀಡಿದ್ದಾರೆ. ಹಾಗಾದರೆ ಇದ್ಯಾವ ಸಭೆ ಎಂದು ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಕೋರ್ಟ್ ಕೇಸ್ ಗಳಿಗೆ ಹಾಜರಾಗುವುದನ್ನು ಬಿಟ್ಟರೆ ಬೇರೆ ಕಾರಣಗಳಿಂದ ಗೈರಾದ ಅಧಿಕಾರಿಗಳ ಮಾಹಿತಿಯನ್ನು ಡಿಸಿಎಂ ಪಡೆದುಕೊಂಡಿದ್ದಾರೆ. ಏಳೆಂಟು ಅಧಿಕಾರಿಗಳನ್ನು ಬಿಟ್ಟರೆ ಬೇರೆ ಅಧಿಕಾರಿಗಳ ಮುಖವನ್ನು ನಾನು ನೋಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರನ್ನು ಬಂದು ಭೇಟಿ ಮಾಡುವ ಸೌಜನ್ಯವೂ ಇಲ್ಲ. ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಈ ಬಗ್ಗೆ ಯಾರೂ ವರದಿ ನೀಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.