ಮಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭೂ ಕುಸಿತ, ಗುಡ್ಡ ಕುಸಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗುಡ್ಡ ಕುಸಿತ ಪರಿಣಾಮ ರಾಷ್ಟ್ರೀಯ ಹೆದ್ದಾರಿಯೇ ಬಂದ್ ಆಗಿದೆ.
ಜಿಲ್ಲೆಯಾದ್ಯಾಂತ ಧಾರಾಕಾರ ಮಳೆಯಾಗುತ್ತಿದ್ದು, ಪುತ್ತೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಇದರಿಂದಾಗಿ ಮಾಣಿ-ಮೈಸೂರು ನಡುವೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.
ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಎಂಬಾಲಿ ಹೆದ್ದಾರಿ ಮೇಲೆ ಇಂದು ಬೆಳಿಗ್ಗೆ ಗುಡ್ಡ ಕುಸಿದುಬಿದ್ದಿದ್ದು, ರಸ್ತೆಯಲ್ಲಿ ಮಣ್ಣು, ಬಂಡೆಗಳು, ಬೃಹತ್ ಮರಗಳು ಬಿದ್ದಿವೆ. ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಮಡಿಕೇರಿ ಹಾಗೂ ಮೈಸೂರು ಕಡೆ ತೆರಳುವವರಿಗೆ ಬದಲಿ ಮಾರ್ಗವಾಗಿ ಪುತ್ತೂರು ಸಿಟಿ ಮೂಲಕ ಸಂಚರಿಸಲು ಸೂಚಿಸಲಾಗಿದೆ.