ನವದೆಹಲಿ: ಭಾರತೀಯ ಅಧಿಕಾರಿಗಳು ಉಕ್ರೇನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದು, ನವೀನ್ ಶೇಖರಪ್ಪ ಅವರ ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.
ನಾವು ಉಕ್ರೇನಿಯನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೇವೆ ಮತ್ತು ನವೀನ್ ಅವರ ಮೃತ ದೇಹವನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ರಷ್ಯಾದ ಸೈನಿಕರು ಉಕ್ರೇನ್ ನ ಖಾರ್ಕಿವ್ ನಲ್ಲಿ ಸರ್ಕಾರಿ ಕಟ್ಟಡವನ್ನು ಸ್ಫೋಟಿಸಿದಾಗ ಕರ್ನಾಟಕದ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಸಾವನ್ನಪ್ಪಿದರು. ನವೀನ್ ಅವರು ಕಿರಾಣಿ ಅಂಗಡಿಯೊಂದರ ಹೊರಗೆ ನಿಂತಿದ್ದಾಗ ದುರಂತ ಸಂಭವಿಸಿತ್ತು. ನವೀನ್ ಅವರ ಪಾರ್ಥಿವ ಶರೀರವನ್ನು ವಿಶ್ವವಿದ್ಯಾಲಯದ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
ಇದಕ್ಕೂ ಮುನ್ನ ವಿದೇಶಾಂಗ ಕಾರ್ಯದರ್ಶಿ ಹೆಚ್.ವಿ. ಶೃಂಗ್ಲಾ ಅವರು, ನವೀನ್ ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ನವೀನ್ ಅವರ ತಂದೆಯೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದರು.
ನವೀನ್ ಅವರ ಮೃತದೇಹವನ್ನು ಮರಳಿ ಭಾರತಕ್ಕೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನನಗೆ ಅವರ ಕುಟುಂಬ ತಿಳಿದಿದೆ. ಅವರು ನನಗೆ ತುಂಬಾ ಆತ್ಮೀಯರಾಗಿದ್ದಾರೆ. ಪ್ರಧಾನಿ ಅವರೂ ನವೀನ್ ಕುಟುಂಬದೊಂದಿಗೆ ಮಾತನಾಡಿದ್ದಾರೆ. ಮೃತದೇಹವನ್ನು ಮರಳಿ ಭಾರತಕ್ಕೆ ತರಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಸಹಾಯ ಮಾಡುವಂತೆ ನಾನು ಪಿಎಂಒ ಮತ್ತು ಎಂಇಎಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದರು.