ಹೈದರಾಬಾದ್: ಡಿಸೆಂಬರ್ 4 ರಂದು ಹೈದರಾಬಾದ್‌ನಲ್ಲಿ ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಬಲಿಯಾದ ರೇವತಿ ಅವರ ಕುಟುಂಬಕ್ಕೆ ‘ಪುಷ್ಪ 2’ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಆರ್ಥಿಕ ನೆರವು ನೀಡಿದೆ.
ಈ ಘಟನೆಯಲ್ಲಿ ರೇವತಿ ಮೃತಪಟ್ಟಿದ್ದು, 8 ವರ್ಷದ ಪುತ್ರ ಪ್ರಸ್ತುತ ನಗರದ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಂಧ್ಯಾ ಥಿಯೇಟರ್ ನಲ್ಲಿ ‘ಪುಷ್ಪ 2’ ಸಿನಿಮಾ ನೋಡಲು ಹೋಗಿದ್ದ ವೇಳೆ ಘಟನೆ ನಡೆದಿತ್ತು. ಸಂತ್ರಸ್ತರ ಕುಟುಂಬಕ್ಕೆ ನಿರ್ಮಾಪಕ ನವೀನ್ ಯೆರ್ನೇನಿ 50 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ತೇಜ್ ಅವರನ್ನು ಸಚಿವ ಕೋಮಟಿ ರೆಡ್ಡಿ ಅವರೊಂದಿಗೆ ನವೀನ್ ಯೆರ್ನೇನಿ ಭೇಟಿ ಮಾಡಿ, ಮೃತಳ ಪತಿ ಭಾಸ್ಕರ್ ಅವರಿಗೆ ಚೆಕ್ ನೀಡಿದರು.
ಶ್ರೀ ತೇಜ್ ಅವರ ಕುಟುಂಬಕ್ಕೆ ಅಲ್ಲು ಅರ್ಜುನ್ 25 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ನಿರ್ದೇಶಕ ಸುಕುಮಾರ್ ಮತ್ತು ಅವರ ಪತ್ನಿ ತಬಿತಾ ಕೂಡ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ, ನಿರ್ಮಾಪಕರಾದ ಅಲ್ಲು ಅರವಿಂದ್ ಮತ್ತು ಬನ್ನಿ ವಾಸುಲು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಬೆಂಬಲದ ಭರವಸೆ ನೀಡಿದ್ದಾರೆ.