ಚಿಕ್ಕಬಳ್ಳಾಪುರ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2 ದಿ ರೂಲ್’ ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಎಲ್ಲೆಡೆ ಅಭಿಮಾನಿಗಳು ಮುಗಿಬಿದ್ದು ಚಿತ್ರ ವೀಕ್ಷಿಸುತ್ತಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಸಿನಿಮಾ ನೋಡಲು ಹೋಗಿದ್ದ ಯುವಕನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಆಂಧ್ರಪ್ರದೇಶದ ಶ್ರೀ ಕಾಕುಳಂ ಮೂಲದ ಪ್ರವೀಣ್(19) ಮೃತಪಟ್ಟ ಯುವಕ ಎಂದು ಹೇಳಲಾಗಿದೆ.
ಬ್ಯಾಂಕ್ ಸರ್ಕಲ್ ಬಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ‘ಪುಷ್ಪ 2’ ಸಿನಿಮಾ ನೋಡಲು ಬೆಳಗ್ಗೆ ಗೆಳೆಯರೊಂದಿಗೆ ವೈಭವ್ ಚಿತ್ರಮಂದಿರಕ್ಕೆ ತೆರಳಿತ್ತಿದ್ದರು. ಅವರು ಹಳಿ ದಾಟುವಾಗ ಏಕಕಾಲದಲ್ಲಿ ಎರಡು ರೈಲುಗಳು ಆಗಮಿಸಿವೆ. ಇದನ್ನು ತಿಳಿಯದ ಪ್ರವೀಣ್ ರೈಲುಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಹೊರ ಠಾಣೆ, ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.