ಪುಣೆ: ಪುಣೆಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ಪಶ್ಚಿಮ ಬಂಗಾಳ ಮೂಲದ 45 ವರ್ಷದ ವಿಧವೆಯನ್ನು ರಕ್ಷಿಸಿದ್ದಾರೆ. ಆಕೆಯ ಮಗನೊಂದಿಗೆ ಮಹಿಳೆಯನ್ನು ಕಳುಹಿಸಲಾಗಿದೆ.
ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಮಹಿಳೆ ಕೊಲ್ಕೊತ್ತಾದಲ್ಲಿ ಗೃಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. 2019 ರಲ್ಲಿ ಉತ್ತಮ ವೇತನದ ಕೆಲಸ ಕೊಡಿಸುವುದಾಗಿ ಮಹಾರಾಷ್ಟ್ರದ ಪುಣೆಗೆ ಕರೆದುಕೊಂಡು ಬಂದು ಆಕೆಯನ್ನು ಮಾಂಸ ವ್ಯಾಪಾರಕ್ಕೆ ತಳ್ಳಲಾಗಿತ್ತು.
ತಿಂಗಳುಗಳ ಕಾಲ ವೇಶ್ಯಾವಾಟಿಕೆ ಅಡ್ಡೆಯಲ್ಲಿದ್ದ ಮಹಿಳೆ ತನ್ನೊಂದಿಗೆ ಸಂಬಂಧ ಬೆಳೆಸಲು ಬಂದಿದ್ದ ಗ್ರಾಹಕನಿಗೆ ಕುಟುಂಬದವರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಳು. ಆಕೆಯ ಮನವಿ ಮೇರೆಗೆ ಮಹಿಳೆಯ 21 ವರ್ಷದ ಮಗನನ್ನು ಸಂಪರ್ಕಿಸಿದ ಗ್ರಾಹಕ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ತಾಯಿ ಪುಣೆಯ ವೇಶ್ಯಾವಾಟಿಕೆ ಅಡ್ಡಯಲ್ಲಿ ಸಿಕ್ಕಿಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದು, ಪುತ್ರರ ಪೊಲೀಸರ ನೆರವು ಯಾಚಿಸಿದ್ದಾನೆ. ಪುಣೆಯ ಅಪರಾಧ ಶಾಖೆಯ ಸಾಮಾಜಿಕ ಭದ್ರತಾ ವಿಭಾಗದ ಪೊಲೀಸರು ಪುಣೆ ಬುದ್ವಾರ್ ಪೇಟೆ ಪ್ರದೇಶದ ವೇಶ್ಯಾಗೃಹದ ಮೇಲೆ ದಾಳಿ ನಡೆಸಿದ್ದಾರೆ. ಲೈಂಗಿಕ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರ ವಿರುದ್ಧ ಅನೈತಿಕ ಕಳ್ಳ ಸಾಗಣೆ ತಡೆ ಕಾಯ್ದೆ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂತ್ರಸ್ಥ ಮಹಿಳೆಯನ್ನು ರಕ್ಷಿಸಿದ್ದಾರೆ.
ವೇಶ್ಯಾವಾಟಿಕೆ ಉದ್ದೇಶಕ್ಕೆ ಮಹಿಳೆ ಮಾರಾಟ ಮಾಡಿದ್ದ ವ್ಯಕ್ತಿಗಳು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಆಶ್ರಯ ತಾಣಕ್ಕೆ ಮಹಿಳೆಯನ್ನು ಸ್ಥಳಾಂತರಿಸಲಾಗಿದ್ದು, ಅದಾದ ಎರಡು ದಿನಗಳ ನಂತರ ನ್ಯಾಯಾಲಯದ ಅನುಮತಿಯೊಂದಿಗೆ ಮಹಿಳೆಯನ್ನು ಆಕೆಯ ಮಗನೊಂದಿಗೆ ಕಳುಹಿಸಲಾಗಿದೆ.
ಶನಿವಾರ ಮಾರ್ಚ್ 6 ರಂದು ತಾಯಿ, ಮಗ ಪುಣೆ ರೈಲ್ವೆ ನಿಲ್ದಾಣದಿಂದ ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ.