ಬೆಂಗಳೂರು: ಮಾನವ ವನ್ಯಜೀವಿ ಸಂಘರ್ಷ ಹಿನ್ನೆಲೆ ಕೃಷಿ ಮಾಡಲು ಸಾಧ್ಯವಾಗದ ಮತ್ತು ವನ್ಯಜೀವಿ ಕಾರಿಡಾರ್ ನಲ್ಲಿರುವ ಖಾಸಗಿ ಜಮೀನುಗಳನ್ನು ರೈತರು ಸ್ವ ಇಚ್ಛೆಯಿಂದ ಸರ್ಕಾರಕ್ಕೆ ಬಿಟ್ಟು ಕೊಡಲು ಮುಂದಾದಲ್ಲಿ ಅಂತಹ ಜಮೀನುಗಳನ್ನು ಉತ್ತಮ ದರ ನಿಗದಿಪಡಿಸಿ ಖರೀದಿಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅರಣ್ಯ ವ್ಯಾಪ್ತಿ ಹೆಚ್ಚಳ, ರೈತರ ಬೆಳೆ ಉಳಿಸಲು ಅರಣ್ಯ ಪ್ರದೇಶಗಳನ್ನು ಒಗ್ಗೂಡಿಸಿ ವನ್ಯಜೀವಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೃಷಿ ಮಾಡಲು ಸಾಧ್ಯವಾಗದಿರುವ ಮತ್ತು ವನ್ಯಜೀವಿ ಕಾರಿಡಾರ್ ನ ಖಾಸಗಿ ಜಮೀನುಗಳನ್ನು ರೈತರ ಸ್ವಚ್ಛೆಯಿಂದ ಸರ್ಕಾರಕ್ಕೆ ಬಿಟ್ಟುಕೊಡಲು ಮುಂದಾದಲ್ಲಿ ಅಂತಹ ಜಮೀನುಗಳನ್ನು ಸ್ವಾಧೀನಕ್ಕೆ ಪಡೆಯಲು ರಚಿಸಲಾದ ಮಾರ್ಗಸೂಚಿಗಳಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
ರಾಜ್ಯದಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗುತ್ತಿಲ್ಲ. ಜೊತೆಗೆ ಅರಣ್ಯ ಮತ್ತು ವನ್ಯಜೀವಿಧಾಮಗಳ ಪ್ರಮಾಣ ಕಡಿಮೆಯಾದ ಪರಿಣಾಮ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಹೀಗಾಗಿ ಅರಣ್ಯ ಪ್ರದೇಶಗಳ ಮಧ್ಯದಲ್ಲಿ ಅಂಚಿನಲ್ಲಿ ಕಾರಿಡಾರ್ ಪ್ರದೇಶಗಳಲ್ಲಿ ಇರುವ ಆದಿವಾಸಿಗಳು, ಪಟ್ಟಾ ಭೂಮಿ ಹೊಂದಿದವರು, ರೈತರು ಸ್ವಯಂ ಪ್ರೇರಣೆಯಿಂದ ತಮ್ಮ ಜಮೀನನ್ನು ಇಲಾಖೆಗೆ ನೀಡಲು ಮುಂದೆ ಬಂದರೆ ಆ ಭೂಮಿಗೆ ಯಾವ ದರ ನೀಡಿ ಪಡೆಯಬೇಕು ಎನ್ನುವುದರ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ.
ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಸಿಸುತ್ತಿದ್ದು, ಹೊರಬರಲು ಸಿದ್ಧವಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ನೀಡುವ ಕುರಿತು ಪ್ರಸ್ತಾಪಿಸಲಾಗಿದೆ.