ಬೆಳಗಾವಿ: ಪುರಸಭೆ ಮುಖ್ಯಾಧಿಕಾರಿ ಹಾಗೂ ವಕೀಲರ ನಡುವೆಯೇ ಹೊಡೆದಾಟ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲುಕಿನಲ್ಲಿ ನಡೆದಿದೆ.
ಅಥಣಿ ಪುರಸಭೆ ಮುಖ್ಯಾಧಿಕಾರಿ ಅಶೋಕ್ ಗೋಡಿಮನಿ ಹಾಗೂ ವಕೀಲ ಮಿತೇಶ್ ಪಟ್ಟಣ ಪುರಸಭೆ ಕಚೇರಿ ಒಳಗಡೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇಬ್ಬರೂ ಗಂಭೀರವಾಗಿ ಗಾಯಗೊಂಡು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಕೀಲ ಮಿತೇಶ್ ಪಟ್ಟಣ ಹೇಳುವ ಪ್ರಕಾರ ಒಂದು ಅರ್ಜಿ ವಿಚಾರವಾಗಿ ಮೂವರು ವಕೀಲರ ಜೊತೆ ಪುರಸಭೆ ಕಚೇರಿ ಮುಖ್ಯ ಅಧಿಕಾರಿ ಅಶೋಕ್ ಅವರನ್ನು ಭೇಟಿಯಾಗಿದ್ದೆವು. ಈ ವೇಳೆ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ಅವರು ನಿಮ್ಮಂತ ವಕೀಲರನ್ನು ತುಂಬಾ ಜನರನ್ನು ನೋಡಿದ್ದೇನೆ ಎಂದು ಹೇಳುತ್ತಾ ಅವಾಚ್ಯವಾಗಿ ನಿಂದಿಸಿ ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದರು.
ಅಥಣಿಯಲ್ಲಿ ಅತಿಕ್ರಮವಾಗಿರುವ ಸರ್ಕಾರಿ ಜಾಗದ ತೆರವು ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಜಿತ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಬಗ್ಗೆ ಪುರಸಭೆ ಮುಖ್ಯಾಧಿಕರಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ವಿಳಂಬ ನೀತಿಯಿಂದ ಬೇಸತ್ತು ಅವರು ಕಾನೂನು ಮೊರೆ ಹೋಗಿದ್ದರು. ಮತ್ತೊಂದು ಅರ್ಜಿ ವಿಚಾರವಾಗಿ ನಾವು ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆ ಹಗೆ ಸಾಧಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.