ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ NDA ಮೈತ್ರಿಕೂಟಕ್ಕೆ ಬಹುಮತ ಲಭಿಸಿದ್ದು, ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಭಾನುವಾರದಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಬಿಜೆಪಿ ಸೇರಿದಂತೆ ಮಿತ್ರ ಪಕ್ಷಗಳ ಒಟ್ಟು 71 ಸಂಸದರು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಮೊದಲ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಖಾತೆ ಹಂಚಿಕೆ ಸೇರಿದಂತೆ ವಿವಿಧ ವಿಷಯಗಳ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಎನ್ ಡಿ ಎ ಸರ್ಕಾರಕ್ಕೆ ಬಹುಮುಖ್ಯ ಆಧಾರ ಸ್ತಂಭವಾಗಿರುವ ಟಿಡಿಪಿ, ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ಆದರೆ ಬಿಜೆಪಿ ಈ ಸ್ಥಾನವನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
ಆಂಧ್ರಪ್ರದೇಶದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಹಾಗೂ ಸಂಸದೆ ಡಿ. ಪುರಂದೇಶ್ವರಿಯವರಿಗೆ ಲೋಕಸಭಾ ಸ್ಪೀಕರ್ ಸ್ಥಾನವನ್ನು ನೀಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಟಿ ಡಿ ಪಿ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲವೆಂಬ ವಿಶ್ವಾಸ ಹೊಂದಿದ್ದಾರೆ. ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಹೊಂದಿರುವ ಪುರಂದೇಶ್ವರಿಯವರು ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾದರೆ ಸದನ ನಡೆಸುವುದು ಸುಗಮವಾಗಬಹುದು ಎಂಬ ನಿರೀಕ್ಷೆ ಬಿಜೆಪಿ ನಾಯಕರಿಗಿದೆ.