![](https://kannadadunia.com/wp-content/uploads/2022/10/cm-shadakshri.png)
ಬೆಂಗಳೂರು: ಗೋವುಗಳ ಪಾಲನೆ ಪೋಷಣೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಪುಣ್ಯಕೋಟಿ ದತ್ತು ಯೋಜನೆ’ಗೆ ರಾಜ್ಯ ಸರ್ಕಾರಿ ನೌಕರರು ಸಾಥ್ ನೀಡಿದ್ದಾರೆ.
ಯೋಜನೆಗೆ ಕೈಜೋಡಿಸಿರುವ ಸರ್ಕಾರಿ ನೌಕರರು ಸುಮಾರು 100 ಕೋಟಿ ರೂ. ದೇಣಿಗೆ ನೀಡಲು ಒಪ್ಪಿಕೊಂಡಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳ ವೇತನದಲ್ಲಿ ನಿರ್ದಿಷ್ಟ ಮೊತ್ತವನ್ನು ಕಡಿತ ಮಾಡಿ ಯೋಜನೆಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರಿ ನೌಕರರ ಪರವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಮ್ಮತಿ ಪತ್ರ ಹಸ್ತಾಂತರಿಸಿದ್ದಾರೆ.
ಎ ವೃಂದದ ಅಧಿಕಾರಿಗಳು 11,000 ರೂ., ಬಿ ವೃಂದದ ಅಧಿಕಾರಿಗಳು 4,000 ರೂ., ಸಿ ವೃಂದದ ಅಧಿಕಾರಿಗಳು 400 ರೂ.ಗಳನ್ನು ಒಂದು ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ದೇಣಿಗೆಯಾಗಿ ಪಾವತಿಸುತ್ತಿದ್ದಾರೆ. ಈ ಮೊತ್ತ 80 ರಿಂದ 100 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.
ಡಿ ವರ್ಗದ ನೌಕರರಿಗೆ ದೇಣಿಗೆಯಿಂದ ವಿನಾಯಿತಿ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಮಾಡಿದ ಮನವಿಗೆ ಸರ್ಕಾರಿ ನೌಕರರ ಸಂಘ ಸ್ಪಂದಿಸಿದ್ದು, ಒಂದು ಬಾರಿಗೆ ದೇಣಿಗೆ ನೀಡಲು ನಿರ್ಣಯ ಕೈಗೊಂಡಿದೆ.