ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೋವೊಂದರಲ್ಲಿ 19 ವರ್ಷದ ಯುವಕನೊಬ್ಬ ಪಂಜಾಬ್‌ನ ನ್ಯಾಯಾಲಯದ ಆವರಣದಲ್ಲಿ ಪೋಲೀಸ್ ಬೆಂಗಾವಲಿನಲ್ಲಿ ಬರುತ್ತಿದ್ದು ಹೆಮ್ಮೆಯಿಂದ ಕ್ಯಾಮೆರಾದತ್ತ ಕೈಬೀಸಿರುವುದು ಗಮನ ಸೆಳೆದಿದೆ.
ಪೊಲೀಸರು ಆತನನ್ನು ಕರೆತರುತ್ತಿದ್ದಾಗ ತನ್ನ ತಲೆಯನ್ನು ಮೇಲಕ್ಕೆತ್ತಿ ಹೆಮ್ಮೆಯಿಂದ ಹೆಜ್ಜೆ ಹಾಕುತ್ತಾ, ನಗುತ್ತಾ ಕ್ಯಾಮೆರಾದತ್ತ ಕೈ ಬೀಸಿದ್ದಾನೆ.
ಪೊಲೀಸ್ ಕಸ್ಟಡಿಯಲ್ಲಿರುವಾಗ ಯುವಕನ ಆಶ್ಚರ್ಯಕರ ವರ್ತನೆಯು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಗೊಂದಲಕ್ಕೀಡುಮಾಡಿತು. ಆರಂಭದಲ್ಲಿ ಯುವಕನ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಯುವಕನ ನಡೆಗೆ ಕಾರಣ ತಿಳಿದಾಗ ನೆಟ್ಟಿಗರು ಧೈರ್ಯ ಮತ್ತು ಭಯಾನಕತೆಯ ಮಿಶ್ರ ಭಾವವನ್ನು ಅನುಭವಿಸಿದರು.
ತನ್ನ ಸಹೋದರಿಯನ್ನು 10 ವರ್ಷಗಳ ಹಿಂದೆ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಕೊಂದಿದ್ದ ಯುವಕ ತೃಪ್ತಭಾವದಿಂದ ಪೊಲೀಸರ ಬಂಧನದಲ್ಲಿದ್ದಾಗ ಸ್ಮೈಲ್ ಮಾಡಿದ್ದ.
ಘಟನೆಯ ಹಿನ್ನೆಲೆ ನೋಡಿದಾಗ ಅತ್ಯಾಚಾರಿಯ 10 ವರ್ಷಗಳ ಜೈಲು ಶಿಕ್ಷೆಯು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕೊನೆಗೊಂಡಿತು. ಯುವಕ ತನ್ನ ಸಹೋದರಿಯ ಅತ್ಯಾಚಾರ ಮತ್ತು ಕೊಲೆಗೆ ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ. ಹಾಗಾಗಿ ವರದಿಗಳ ಪ್ರಕಾರ ಆಗಸ್ಟ್ 28 ರಂದು, ಲವ್‌ಪ್ರೀತ್ ಸಿಂಗ್ ಎಂದು ಗುರುತಿಸಲಾದ ಯುವಕ ತನ್ನ ಸೋದರಿಯನ್ನು ಅತ್ಯಾಚಾರ ಮಾಡಿದ್ದ ವ್ಯಕ್ತಿಯನ್ನು ತನ್ನ ಸಹಚರರೊಂದಿಗೆ ಪಂಜಾಬ್‌ನ ಕಪುರ್ತಲಾದಲ್ಲಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ.
ವಿಷನ್‌ಪುರ ಜಟ್ಟಾ ಗ್ರಾಮದ ಬಳಿ ಓಂಕಾರ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯ ಶವ ಪತ್ತೆ ಪ್ರಕರಣದ ತನಿಖೆಗಿಳಿದಾಗ ವಿಷಯ ಬಯಲಾಗಿತ್ತು. ತನಿಖೆಯ ವೇಳೆ ಓಂಕಾರ್ ಸಿಂಗ್ ವಿರುದ್ಧ 2015ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿದ್ದು, ಅದರಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದಾಗ್ಯೂ ಕರೋನಾ ಅವಧಿಯಲ್ಲಿ ಶಿಕ್ಷೆಯ ಅವಧಿ ಮುಗಿದ ನಂತರ ಓಂಕಾರ್ ಸಿಂಗ್ ನನ್ನು ಬಿಡುಗಡೆ ಮಾಡಲಾಯಿತು.
ಏತನ್ಮಧ್ಯೆ ಅತ್ಯಾಚಾರಕ್ಕೊಳಗಾಗಿದ್ದ ಹುಡುಗಿ ಮತ್ತು ಅವಳ ತಂದೆ ಇಬ್ಬರೂ ಸಾವನ್ನಪ್ಪಿದರು. ಇದರಿಂದ ಲವ್ ಪ್ರೀತ್ ಸಿಂಗ್ ಆಘಾತಕ್ಕೊಳಗಾಗಿ ಅತ್ಯಾಚಾರ ಆರೋಪಿ ಮೇಲೆ ಆಳವಾದ ದ್ವೇಷದ ಭಾವನೆ ಬೆಳೆಸಿಕೊಂಡನು.
ಬಳಿಕ ಲವ್‌ಪ್ರೀತ್ ಸಿಂಗ್ ತನ್ನ ಸಹಚರ ಆಕಾಶ್‌ದೀಪ್‌ನೊಂದಿಗೆ ಆಗಸ್ಟ್ 28 ರ ರಾತ್ರಿ ಓಂಕಾರ್ ಸಿಂಗ್‌ನನ್ನು ಹರಿತವಾದ ಆಯುಧಗಳಿಂದ ಕೊಲೆ ಮಾಡಿದ್ದಾನೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೃತ ಓಂಕಾರ್ ಸಿಂಗ್ ಅವರ ಪುತ್ರ ಸರ್ವಾನ್ ಸಿಂಗ್ ಹೇಳಿಕೆಯ ಮೇರೆಗೆ ಆರೋಪಿಗಳಾದ ಮಜದ್‌ಪುರ ಗ್ರಾಮದ ನಿವಾಸಿ ಆಕಾಶದೀಪ್ ಮತ್ತು ಲವ್‌ಪ್ರೀತ್ ನನ್ನು ಹೆಸರಿಸಿ ಎಫ್‌ಐಆರ್ ದಾಖಲಿಸಿದರು. ಪೊಲೀಸರು ಆರೋಪಿ ಲವ್‌ಪ್ರೀತ್ ಸಿಂಗ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಆತ ಸ್ಮೈಲ್ ಮಾಡುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದ. ಅದರ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.