ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಭದೌರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ತನ್ನ ಪಟ್ಟಿಯಲ್ಲಿ ಇನ್ನೂ 8 ಅಭ್ಯರ್ಥಿಗಳನ್ನು ಹೆಸರಿಸಿದೆ. ಜನವರಿ 15 ರಂದು ಕಾಂಗ್ರೆಸ್ ಚಮ್ಕೌರ್ ಸಾಹಿಬ್ ಎಸ್‌ಸಿ ಕ್ಷೇತ್ರದಿಂದ ಚನ್ನಿಗೆ ಟಿಕೆಟ್ ನೀಡಿತ್ತು. ಸಿಎಂ ಚನ್ನಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ಈ ಹಿಂದೆ ತಿಳಿಸಿದ್ದವು.
ಪಟಿಯಾಲಾ ಕ್ಷೇತ್ರದಿಂದ ಪಟಿಯಾಲದ ಮಾಜಿ ಮೇಯರ್ ವಿಷ್ಣು ಶರ್ಮಾ ಅವರನ್ನು ಕಾಂಗ್ರೆಸ್ ತನ್ನ ಮಾಜಿ ನಾಯಕ ಅಮರಿಂದರ್ ಸಿಂಗ್ ವಿರುದ್ಧ ಕಣಕ್ಕಿಳಿಸಿದೆ.
ಮಾಜಿ ಕೇಂದ್ರ ಸಚಿವ ಪವನ್ ಕುಮಾರ್ ಬನ್ಸಾಲ್ ಅವರ ಪುತ್ರ ಮನೀಶ್ ಬನ್ಸಾಲ್ ಬರ್ನಾಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಮೋಹನ್ ಸಿಂಗ್ ಫಲಿಯನ್ ವಾಲಾ ಜಲಾಲಾಬಾದ್ ವಿಧಾನಸಭಾ ಕ್ಷೇತ್ರದಿಂದ ಶಿರೋಮಣಿ ಅಕಾಲಿದಳದ ಸುಖಬೀರ್ ಸಿಂಗ್ ಬಾದಲ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಈಶ್ವರಜೋತ್ ಸಿಂಗ್ ಚೀಮಾ ಅವರು ಲುಧಿಯಾನ ದಕ್ಷಿಣದಿಂದ, ಸುಖಪಾಲ್ ಸಿಂಗ್ ಭುಲ್ಲರ್ ಖೇಮ್ ಕರಣ್‌ನಿಂದ, ತಾರ್ಸೆಮ್ ಸಿಂಗ್ ಸಿಯಾಲಾ ಅಟ್ಟಾರಿ (ಎಸ್‌ಸಿ) ಕ್ಷೇತ್ರದಿಂದ ಮತ್ತು ಸತ್ಬೀರ್ ಸಿಂಗ್ ಸೈನಿ ಬಲಿಚಿಕಿ ನವನ್ ಶಾಹರ್‌ನಿಂದ ಸ್ಪರ್ಧಿಸಲಿದ್ದಾರೆ.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.