ಪಂಜಾಬ್ ವಿಧಾನಸಭಾ ಚುನಾವಣೆ ಕಣ ದಿನಕ್ಕೊಂದು ಬೆಳವಣಿಗೆಯಿಂದ ಕುತೂಹಲಕಾರಿಯಾಗುತ್ತಿದೆ. ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಆಮ್ಆದ್ಮಿ ಪಾರ್ಟಿಯ ನಡುವೆ ನೆಕ್ ಟು ನೆಕ್ ಫೈಟ್ ನಡೆಯಲಿದೆ ಎಂದು ಹಲವಾರು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಿರುವಾಗ ಎಎಪಿಯ ಸಿಎಂ ಅಭ್ಯರ್ಥಿ ಭಗವಂತ್ ಮಾನ್, ಸಿಎಂ ಚನ್ನಿಗೆ ತನ್ನ ಕ್ಷೇತ್ರದಲ್ಲಿ ಸ್ಪರ್ಧಿಸಲು ಸವಾಲು ಹಾಕಿದ್ದಾರೆ.
ಧುರಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಎಪಿಯ ಭಗವಂತ್ ಮಾನ್, ಸಿಎಂ ಚನ್ನಿಗೆ ತನ್ನ ವಿರುದ್ಧ ತನ್ನ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಬಹಿರಂಗವಾಗಿ ಸವಾಲಾಕಿದ್ದಾರೆ. ಸಿಎಂ ಚನ್ನಿ ಸ್ಪರ್ಧಿಸುತ್ತಿರುವ ಚಮತ್ಕಾರ್ ಸಾಹಿಬ್ ಕ್ಷೇತ್ರ ಮೀಸಲು ಕ್ಷೇತ್ರವಾಗಿರುವುದರಿಂದ ನಾನು ಅಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ಅವರು ನನ್ನ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು, ಅವರಿಗೆ ನಾನು ಸ್ವಾಗತ ಕೋರುತ್ತೇನೆ ಎಂದಿದ್ದಾರೆ.
ಭಗವಂತ್ ಮಾನ್ ಸಂಸದರಾಗಿರುವ ಸಂಗ್ರೂರ್ ಜಿಲ್ಲೆಯಲ್ಲಿ ಈ ಧುರಿ ಕ್ಷೇತ್ರವಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ನ ದಲ್ವೀರ್ ಸಿಂಗ್ ಖಂಗುರಾ ಶಾಸಕರಾಗಿದ್ದಾರೆ.