ಗಣರಾಜ್ಯೋತ್ಸವದಂದು ನಡೆಯಬಹುದಾಗಿದ್ದ ಸಂಭವನೀಯ ಭಯೋತ್ಪಾದಕ ದಾಳಿಯನ್ನು ಪಂಜಾಬ್ ಪೊಲೀಸರು ತಡೆದಿದ್ದಾರೆ.
ಗುರುದಾಸ್‌ಪುರದಿಂದ ಶುಕ್ರವಾರ 40 ಎಂಎಂ ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್(ಯುಬಿಜಿಎಲ್) ಜೊತೆಗೆ ಎರಡು 40 ಎಂಎಂ ಗ್ರೆನೇಡ್‌ಗಳು, 3.79 ಕೆಜಿ ಆರ್‌ಡಿಎಕ್ಸ್, ಒಂಬತ್ತು ಎಲೆಕ್ಟ್ರಿಕಲ್ ಡಿಟೋನೇಟರ್‌ಗಳು, ಐಇಡಿಗಳು ಮತ್ತು ಎರಡು ಸೆಟ್ ಟೈಮರ್ ಸಾಧನಗಳನ್ನು ವಶಕ್ಕೆ ಪಡೆಯುವ ಮೂಲ ಪಂಜಾಬ್ ಪೊಲೀಸರು ದಾಳಿ ತಡೆದಿದ್ದಾರೆ.
ಪೊಲೀಸ್ ಮಹಾನಿರ್ದೇಶಕ(ಐಜಿಪಿ) ಬಾರ್ಡರ್ ರೇಂಜ್ ಮೋಹಿನೀಶ್ ಚಾವ್ಲಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
UBGL 150 ಮೀಟರ್ ಗಳ ಪರಿಣಾಮಕಾರಿ ವ್ಯಾಪ್ತಿಯನ್ನು ಹೊಂದಿರುವ ಅಲ್ಪ-ಶ್ರೇಣಿಯ ಗ್ರೆನೇಡ್ ಉಡಾವಣಾ ಶಸ್ತ್ರಾಸ್ತ್ರವಾಗಿದೆ. ಇದು VVIP ಭದ್ರತೆಗೆ ಹಾನಿಕಾರಕವಾಗಿದೆ.
ಗುರುದಾಸ್ ಪುರದ ಗಾಜಿಕೋಟ್ ಗ್ರಾಮದ ನಿವಾಸಿ ಮಲ್ಕೀತ್ ಸಿಂಗ್ ಎಂಬುವವನಿಂದ ಶಸ್ತ್ರಾಸ್ತ್ರಗಳು ಮತ್ತು ಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಹಸ್ಯ ಮಾಹಿತಿಯ ಆಧಾರದ ಮೇಲೆ ಆತನನ್ನು ಗುರುದಾಸ್‌ಪುರ ಪೊಲೀಸರು ಬಂಧಿಸಿದ್ದಾರೆ.
ಭಯೋತ್ಪಾದನಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇದರ ಹಿಂದೆ ಇರುವವರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ. ಸಹ-ಸಂಚುಕೋರರನ್ನು ಸುಖಪ್ರೀತ್ ಸಿಂಗ್ ಅಲಿಯಾಸ್ ಸುಖ್ ಘುಮಾನ್, ತರಂಜೋತ್ ಸಿಂಗ್ ಅಲಿಯಾಸ್ ತನ್ನಾ ಮತ್ತು ಸುಖ್ಮೀತ್ಪಾಲ್ ಸಿಂಗ್ ಅಲಿಯಾಸ್ ಸುಖ್ ಬಿಖಾರಿವಾಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಗುರುದಾಸ್ ಪುರ ನಿವಾಸಿಗಳಾಗಿದ್ದು, ಪಾಕಿಸ್ತಾನ ಮೂಲದ ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್(ಐಎಸ್‌ವೈಎಫ್) ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಮತ್ತು ಪರಾರಿಯಾಗಿರುವ ದರೋಡೆಕೋರ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲ್ಲಾ ಜೊತೆಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಈ ಪ್ರಕರಣದಲ್ಲಿ ಬಂಧಿತ ಆರೋಪಿ ಮಲ್ಕೀತ್ ಸಿಂಗ್ ಸುಖ್ ಘುಮಾನ್ ನೊಂದಿಗೆ ನೇರ ಸಂಪರ್ಕದಲ್ಲಿದ್ದು, ಐಎಸ್‌ವೈಎಫ್ ಮುಖ್ಯಸ್ಥ ಲಖ್ಬೀರ್ ರೋಡ್ ಜೊತೆ ಸೇರಿ ದಾಳಿಗೆ ಸಂಚು ರೂಪಿಸಿದ್ದ. ಸ್ಫೋಟಕಗಳನ್ನು ಪಾಕಿಸ್ತಾನದಿಂದ ಲಖ್ಬೀರ್ ರೋಡ್ ಕಳುಹಿಸಿದ್ದಾರೆ ಎಂಬುದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ ಎಂದು ಐಜಿ ಮೋಹಿನಿಶ್ ಚಾವ್ಲಾ ಹೇಳಿದ್ದಾರೆ.