ನವದೆಹಲಿ: ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಎನ್.ಆರ್.ಐ. ವಿದ್ಯಾರ್ಥಿಗಳಿಗೆ ಮೀಸಲಾತಿ ನಿಗದಿಪಡಿಸಿದ್ದ ಪಂಜಾಬ್ ಸರ್ಕಾರದ ಆದೇಶವನ್ನು ವಂಚನೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು, ಆಗಸ್ಟ್ 20ರಂದು ಹೊರಡಿಸಿದ ಮೀಸಲು ಅಧಿಸೂಚನೆಯನ್ನು ರದ್ದುಪಡಿಸಿದೆ.
ವೈದ್ಯಕೀಯ ಶಿಕ್ಷಣ ಪ್ರವೇಶದ ವೇಳೆ ಎನ್.ಆರ್.ಐ. ವಿದ್ಯಾರ್ಥಿಗಳಿಗೆ ಮೀಸಲಾತಿ ನಿಗದಿಪಡಿಸಿದ್ದ ಸರ್ಕಾರದ ಕ್ರಮವನ್ನು ರದ್ದುಗೊಳಿಸಿದ ಪಂಜಾಬ್ -ಹರಿಯಾಣ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಪಂಜಾಬ್ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವಿ. ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರಿದ್ದ ನ್ಯಾಯಪೀಠದಲ್ಲಿ ನಡೆದಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಣ ಮಾಡುವ ಉದ್ದೇಶದಿಂದ ರೂಪಿಸಲಾದ ಎನ್.ಆರ್.ಐ. ಮೀಸಲು ವ್ಯವಸ್ಥೆ ವಂಚನೆಯಾಗಿದೆ.
ಇಂತಹ ದಂಧೆಗೆ ಕಡಿವಾಣ ಹಾಕದಿದ್ದಲ್ಲಿ ಶಿಕ್ಷಣ ವ್ಯವಸ್ಥೆ ಅಧಃಪತನದ ಹಾದಿ ಹಿಡಿಯುತ್ತದೆ. ಅನಿವಾಸಿ ಭಾರತೀಯರಿಗೆ ಸೀಟು ನೀಡುವುದು ಹಣದ ವ್ಯವಹಾರವಾಗಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ.
ಎನ್.ಆರ್.ಐ. ವಿದ್ಯಾರ್ಥಿಗಳಿಗೆ ಮೀಸಲು ನೀಡುವ ನಿರ್ಧಾರ ಕೇವಲ ಹಣ ಮಾಡುವ ತಂತ್ರವಾಗಿದೆ. ಇಂತಹ ಕ್ರಮಗಳಿಗೆ ಕೋರ್ಟ್ ಬೆಂಬಲ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ರಾಜ್ಯದಲ್ಲಿ ಪದವಿ ಪೂರ್ವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ‘ಎನ್‌ಆರ್‌ಐ ಕೋಟಾ’ ವ್ಯಾಖ್ಯಾನವನ್ನು ವಿಸ್ತರಿಸುವ ತನ್ನ ನಿರ್ಧಾರವನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಪಂಜಾಬ್ ಸರ್ಕಾರದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಈ ವಂಚನೆ ಈಗ ಕೊನೆಗೊಳ್ಳಬೇಕು ಎಂದು ಹೇಳಿದೆ.