ಅಮೃತಸರ: ವ್ಯಕ್ತಿಯೊಬ್ಬ ತನ್ನ ಮಗಳನ್ನು ಕೊಂದು, ಆಕೆಯ ದೇಹವನ್ನು ಬೈಕ್ಗೆ ಕಟ್ಟಿ, ರಸ್ತೆಯಲ್ಲಿ ಎಳೆದೊಯ್ದು ರೈಲು ಹಳಿಗಳ ಮೇಲೆ ಎಸೆದಿರುವ ಭೀಬತ್ಸ ಘಟನೆ ಪಂಜಾಬ್ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ. ಅಪರಾಧದ ಸಿಸಿ ಟಿವಿ ದೃಶ್ಯಾವಳಿ ಕೂಡ ಹೊರಬಿದ್ದಿದೆ.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಆರೋಪಿಯು ತನ್ನ ಮಗಳ ಚಾರಿತ್ರ್ಯದ ಮೇಲೆ ಅನುಮಾನ ವ್ಯಕ್ತಪಡಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮನೆಯಿಂದ ಹೊರಬಂದಿದ್ದ ಆರೋಪಿ ಪುತ್ರಿ ಬಳಿಕ ಹಿಂದಿರುಗಿದ್ದಾಳೆ. ಈ ವೇಳೆ ಈಕೆಯ ತಂದೆ ಹರಿತವಾದ ಆಯುಧಗಳಿಂದ ಇರಿದು ಮಗಳನ್ನು ಹತ್ಯೆ ಮಾಡಿದ್ದಾನೆ. ಹತ್ಯೆಯ ಹಿಂದಿನ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ಆರೋಪಿಯು ತನ್ನ ಕುಟುಂಬ ಸದಸ್ಯರನ್ನು ಮನೆಯಲ್ಲಿ ಬಂಧಿಸಿ ಅವರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಭಯದಿಂದಾಗಿ ಅವರು ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ರು. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.