ಚಂಡೀಗಢ: ಪಂಜಾಬ್ ನ ಮೋಗಾ ಜಿಲ್ಲೆಯಲ್ಲಿ 18 ವರ್ಷದ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರು ಯುವಕರು ಕ್ರೀಡಾಂಗಣದ ಮೇಲ್ಛಾವಣಿಯಿಂದ ತಳ್ಳಿದ್ದಾರೆ. ಆಕೆಗೆ ಮೂಳೆ ಮುರಿತವಾಗಿ ಗಾಯಗೊಂಡಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆಟಗಾರ್ತಿಯನ್ನು ಲುಧಿಯಾನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಎರಡೂ ಕಾಲುಗಳು ಮತ್ತು ದವಡೆಯ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಗಸ್ಟ್ 12 ರಂದು ಈ ಘಟನೆ ನಡೆದಿದ್ದು, ಮೂವರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ತಂದೆ ನೀಡಿದ ದೂರಿನ ಪ್ರಕಾರ, ಅವರ ಮಗಳು ಅಭ್ಯಾಸಕ್ಕಾಗಿ ಮೊಗಾದ ಕ್ರೀಡಾಂಗಣಕ್ಕೆ ಹೋಗಿದ್ದರು. ಜತಿನ್ ಕಾಂಡ ಎಂದು ಗುರುತಿಸಲಾದ ಆರೋಪಿಗಳಲ್ಲಿ ಒಬ್ಬರು ಕ್ರೀಡಾಂಗಣದಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆ ಪ್ರತಿಭಟಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅವನು ಅವಳನ್ನು ಸುಮಾರು 25 ಅಡಿ ಎತ್ತರದಿಂದ ತಳ್ಳಿದ್ದಾನೆ. ಜತಿನ್ ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಕೊಲೆ, ಅತ್ಯಾಚಾರ ಯತ್ನ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೊಗಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಖುರಾನಾ ತಿಳಿಸಿದ್ದಾರೆ.