ಜನತೆಗೆ ಉತ್ತಮ ಆರೋಗ್ಯ ವ್ಯವಸ್ಥೆ ಶಿಕ್ಷಣ ನೀಡುವ ಭರವಸೆಯೊಂದಿಗೆ ಪಂಜಾಬಿನಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ಈಗ ಸರ್ಕಾರಿ ಆಸ್ಪತ್ರೆಯೊಂದರ ಪ್ರಕಟಣೆಯ ಕಾರಣಕ್ಕೆ ಮುಜುಗರಕ್ಕೆ ಸಿಲುಕಿದೆ. ಆಸ್ಪತ್ರೆಯಲ್ಲಿ ಎಕ್ಸರೇ ಫಿಲಂ ಖಾಲಿಯಾಗಿರುವ ಕಾರಣ ರೋಗಿಗಳು ಸ್ಮಾರ್ಟ್ ಫೋನ್ ತರಬೇಕೆಂದು ಸೂಚಿಸಿರುವುದೇ ಇದಕ್ಕೆ ಕಾರಣ.
ಪಂಜಾಬಿನ ಪಟಿಯಾಲ ಆಸ್ಪತ್ರೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಎಕ್ಸ್ ರೇ ತೆಗೆದ ಬಳಿಕ ರೋಗಿಗಳಿಗೆ ಭೌತಿಕ ಪ್ರತಿ ನೀಡಲು ಆಸ್ಪತ್ರೆಯಲ್ಲಿ ಫಿಲ್ಮ್ ಇಲ್ಲವಂತೆ. ಹೀಗಾಗಿ ಸ್ಮಾರ್ಟ್ ಫೋನ್ ತೆಗೆದುಕೊಂಡು ಬಂದರೆ ಅದರ ಫೋಟೋ ತೆಗೆದು ಕೊಡುವುದಾಗಿ ಸಿಬ್ಬಂದಿ ಹೇಳಿದ್ದಾರೆ.
ಆದರೆ ಬಡ ಮತ್ತು ಮಧ್ಯಮ ವರ್ಗದ ಎಲ್ಲರೂ ಸ್ಮಾರ್ಟ್ ಫೋನ್ ಹೊಂದಿರುವುದು ಸಾಧ್ಯವಿಲ್ಲ. ಹೀಗಾಗಿ ಎಕ್ಸರೆ ತೆಗೆಸಿಕೊಂಡ ಬಳಿಕ ಅದರ ಪ್ರತಿ ತೆಗೆದುಕೊಂಡು ತಪಾಸಣೆಗೆ ವೈದ್ಯರ ಬಳಿ ಹೋಗಲು ಆಗುತ್ತಿಲ್ಲ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಆಸ್ಪತ್ರೆಯ ಅಧೀಕ್ಷಕ, ಎಕ್ಸರೇ ಫಿಲಂ ಲಭ್ಯವಿಲ್ಲದ ಕಾರಣಕ್ಕೆ ಸ್ಮಾರ್ಟ್ ಫೋನ್ ತೆಗೆದುಕೊಂಡು ಬರಲು ಹೇಳಲಾಗುತ್ತಿದೆ. ಒಂದು ವೇಳೆ ಸ್ಮಾರ್ಟ್ಫೋನ್ ಇಲ್ಲದಿದ್ದವರಿಗೆ ಅವರು ಹೇಳಿದ ವೈದ್ಯರ ಇಮೇಲ್ ವಿಳಾಸಕ್ಕೆ ಎಕ್ಸ್ ರೇ ಕಳಿಸಲಾಗುತ್ತಿದೆ ಎಂದಿದ್ದಾರೆ