ಪಂಜಾಬ್ ಸಿಎಂ ಸ್ಥಾನದಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಏಕೆ ಕೆಳಗಿಳಿಸಲಾಯಿತು ಎಂಬುದನ್ನು ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ.
ಪಂಜಾಬ್ ಚುನಾವಣೆ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಮೇಲೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಂಜಾಬ್ನಲ್ಲಿ ಬಡ ಜನರಿಗೆ ಉಚಿತ ವಿದ್ಯುತ್ ನೀಡಲು ನಿರಾಕರಿಸಿದ ಕಾರಣ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ.
ಪಂಜಾಬ್ ನ ಫತೇಘರ್ ಸಾಹಿಬ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಪಂಜಾಬ್ ಸಿಎಂ ಸ್ಥಾನದಿಂದ ಏಕೆ ತೆಗೆದುಹಾಕಲಾಯಿತು ಎಂದು ನಾನು ನಿಮಗೆ ಹೇಳುತ್ತೇನೆ. ಬಡ ಜನರಿಗೆ ಉಚಿತ ವಿದ್ಯುತ್ ನೀಡಲು ಅವರು ಒಪ್ಪದ ಕಾರಣ ಅವರನ್ನು ಕೆಳಗಿಳಿಸಲಾಯಿತು ಎಂದು ಹೇಳಿದರು.
ನಾನು ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ ಒಪ್ಪಂದವನ್ನು ಹೊಂದಿದ್ದೇನೆ ಎಂದು ಅವರು ಹೇಳಿದ್ದರು ಎಂದು ರಾಹುಲ್ ಗಾಂಧಿ ತಿಳಿಸಿದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರವನ್ನು ದೆಹಲಿಯಿಂದ ಬಿಜೆಪಿ ನಡೆಸುತ್ತಿದ್ದ ಕಾರಣ ಅವರನ್ನು ಬದಲಾಯಿಸಬೇಕಾಯಿತು ಎಂದು ಹೇಳಿದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಅಧಿಕಾರಕ್ಕಾಗಿ ನಡೆದ ಕಲಹದ ನಂತರ ಅಮರಿಂದರ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಕಾಂಗ್ರೆಸ್ ತೊರೆದ ಅವರು ಪಂಜಾಬ್ ಲೋಕ ಕಾಂಗ್ರೆಸ್(PLC) ಎಂಬ ತಮ್ಮದೇ ಪಕ್ಷವನ್ನು ಆರಂಭಿಸಿದರು. ಪಿಎಲ್ಸಿಯು ಬಿಜೆಪಿ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ನೇತೃತ್ವದ ಶಿರೋಮಣಿ ಅಕಾಲಿದಳ (ಸಂಯುಕ್ತ) ಜೊತೆ ಮೈತ್ರಿ ಮಾಡಿಕೊಂಡು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದೆ.