ಚಂಡೀಗಡ: ಪಂಜಾಬ್ ಕಾಂಗ್ರೆಸ್ ಶಾಸಕ ಸುಖಪಾಲ್ ಖೈರಾ ಅವರನ್ನು 2015ರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
2015ರಲ್ಲಿ ದಾಖಲಾದ ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ ಖೈರಾ ಹೆಸರು ಕೇಳಿಬಂದಿತ್ತು. ಈ ಬೆಳವಣಿಗೆಯು ಪಂಜಾಬ್‌ನಲ್ಲಿನ ಮಾದಕವಸ್ತು ಕಳ್ಳಸಾಗಣೆಯ ಮತ್ತೊಂದು ಕರಾಳ ದಂಧೆಯ ಬಯಲಿಗೆಳೆದಿದೆ.
2015ರ ಮಾರ್ಚ್ 9ರಂದು ವಾಹನವೊಂದರಲ್ಲಿ 24 ಚಿನ್ನದ ಬಿಸ್ಕತ್ತುಗಳ ಜೊತೆಗೆ ಎರಡು ಕಿಲೋಗ್ರಾಂಗಳಷ್ಟು ಹೆರಾಯಿನ್ ವಶಪಡಿಸಿಕೊಂಡು ಫಾಜಿಲ್ಕಾ ಪೊಲೀಸರು ಮಾದಕ ದ್ರವ್ಯ ಸಾಗಾಟ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದರು ಮತ್ತು ಅವರ ಬಳಿಯಿದ್ದ ಎರಡು ಪಾಕಿಸ್ತಾನಿ ಸಿಮ್ ಕಾರ್ಡ್‌ಗಳ ಜೊತೆಗೆ ದೇಶದಲ್ಲಿ ತಯಾರಿಸಿದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಅಂದಿನ ದಿಲ್ವಾನ್ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಗುರುದೇವ್ ಸಿಂಗ್ ಕೂಡ ಸೇರಿದ್ದಾರೆ.
ಗುರ್‌ದೇವ್ ಸಿಂಗ್ ಅವರು ಸುಖಪಾಲ್ ಖೈರಾ ಅವರಿಗೆ ಆಪ್ತರಾಗಿದ್ದರು ಮತ್ತು ಇಬ್ಬರೂ ಮಾದಕ ದ್ರವ್ಯ ದಂಧೆಯ ಭಾಗವಾಗಿದ್ದರು. ಸುಖಪಾಲ್ ಸಿಂಗ್ ಖೈರಾ ಅವರು ತಮ್ಮ ಖಾಸಗಿ ಕಾರ್ಯದರ್ಶಿ ಮತ್ತು ಪಿಎಸ್‌ಒ ಅವರ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಫೆಬ್ರವರಿ 27, 2015 ರಿಂದ ಮಾರ್ಚ್ 8, 2015 ರ ನಡುವೆ ಗುರ್ದೇವ್ ಅವರೊಂದಿಗೆ 65 ಬಾರಿ ಮಾತನಾಡಿದ್ದಾರೆ.