
ಚಂಡೀಗಡ: ಕೇಬಲ್ ಮಾಫಿಯಾ ವಿರುದ್ಧ ಸಮರ ಸಾರಿರುವ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರು, ರಾಜ್ಯಾದ್ಯಂತ ಕೇಬಲ್ ಟಿವಿ ಸಂಪರ್ಕದ ಮಾಸಿಕ ದರವನ್ನು 100 ರೂ.ಗೆ ನಿಗದಿಪಡಿಸುವುದಾಗಿ ಸೋಮವಾರ ಘೋಷಿಸಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಚನ್ನಿ, ಕೇಬಲ್ ಮಾಫಿಯಾದಿಂದ ಭಾರೀ ಶುಲ್ಕ ವಿಧಿಸುವ ಮೂಲಕ ಜನರಿಗೆ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ, ಇದನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು.
ಸಾರಿಗೆ ಮತ್ತು ಕೇಬಲ್‌ನ ಎಲ್ಲಾ ವ್ಯವಹಾರಗಳು ಬಾದಲ್ ಕುಟುಂಬದ ಒಡೆತನದಲ್ಲಿದೆ. ಈಗ ಜನರು ತಿಂಗಳಿಗೆ 100 ರೂ.ಗಿಂತ ಹೆಚ್ಚು ಪಾವತಿಸಬೇಕಾಗಿಲ್ಲ, ಹೊಸ ದರವನ್ನು ಪಡೆಯದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ಕಿರುಕುಳ ನೀಡಿದರೆ ನನಗೆ ತಿಳಿಸಿ ಎಂದು ಹೇಳಿದ್ದಾರೆ.
ಎಲ್ಲಾ ಅಕ್ರಮ ಬಸ್ ಪರ್ಮಿಟ್‌ಗಳನ್ನು ರದ್ದುಗೊಳಿಸಲಾಗುವುದು. ಪ್ರತಿಯಾಗಿ ನಿರುದ್ಯೋಗಿ ಯುವಕರಿಗೆ ಮಂಜೂರು ಮಾಡಲಾಗುವುದು ಎಂದು ಅವರು ಘೋಷಿಸಿದರು.
ಮುಂದಿನ 10 ದಿನಗಳಲ್ಲಿ ಮುನ್ಸಿಪಲ್ ಕೌನ್ಸಿಲ್ ಮತ್ತು ಕಾರ್ಪೊರೇಶನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ‘ಸಫಾಯಿ ಕರ್ಮಚಾರಿ’ಗಳ ಸೇವೆ ಕಾಯಂಗೊಳಿಸಲಾಗುವುದು. ನೇಮಕಾತಿಗಾಗಿ ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸುವುದರ ಜೊತೆಗೆ 10 ವರ್ಷಗಳ ಸೇವೆಯ ಯಾವುದೇ ಷರತ್ತು ಇರುವುದಿಲ್ಲ ಎಂದು ಘೋಷಿಸಿದ್ದಾರೆ.
ರಾಜ್ಯ ಸರ್ಕಾರವು ಬಡವರ ಕಲ್ಯಾಣಕ್ಕಾಗಿ ಸಂಪೂರ್ಣ ಬದ್ಧವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.