ತನ್ನ ಸ್ನೇಹಿತರ ಮನೆಗೆ ತೆರಳುವ ಸಲುವಾಗಿ ಅಪ್ರಾಪ್ತೆಯೊಬ್ಬಳು ತನ್ನನ್ನ ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂಬಂತೆ ನಾಟಕ ಮಾಡಿದ ಶಾಕಿಂಗ್ ಘಟನೆಯೊಂದು ಪಂಜಾಬ್ನ ಲೂಧಿಯಾನ ಜಿಲ್ಲೆಯ ಭಮಿಯಾನ ಕಲನ್ ಏರಿಯಾದಲ್ಲಿ ನಡೆದಿದೆ.
ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಬಾಲಕಿ ತನ್ನ ಪೋಷಕರ ಬಳಿ ನನ್ನನ್ನ ಯಾರೋ ಐವರು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳುವಂತೆ ಸ್ನೇಹಿತರನ್ನು ಒಪ್ಪಿಸಿದ್ದಳು. ಸೋಮವಾರ ಮಧ್ಯಾಹ್ನ ಈಕೆ ಶಾಲೆಯಿಂದ ವಾಪಸ್ಸಾಗದ್ದನ್ನು ಕಂಡ ಪೋಷಕರು ಆಕೆಗಾಗಿ ಸಹಪಾಠಿಗಳ ಮನೆಗಳಲ್ಲಿ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ.
ಅಪ್ರಾಪ್ತೆಯ ಸಹಪಾಠಿ ಈಕೆ ಕಿಡ್ನಾಪ್ ಆಗಿದ್ದಾಳೆ ಎಂದು ಹೇಳಿದ ಕಟ್ಟುಕತೆಯನ್ನು ನಂಬಿದ ಪೋಷಕರು ಜಮಲಾಪುರ ಠಾಣೆಯಲ್ಲಿ ದೂರನ್ನು ನೀಡಿದ್ದರು. ಇದಾದ ಬಳಿಕ ಅಲರ್ಟ್ ಆದ ಪೊಲೀಸರು ತನಿಖೆ ಚುರುಕುಗೊಳಿಸಿದ್ರು.
ಪೊಲೀಸರು ಆಕೆಯ ಸಹಪಾಠಿಗಳನ್ನು ವಿಚಾರಿಸಿದ ವೇಳೆ ಸತ್ಯಾಂಶ ಹೊರಬಿದ್ದಿದೆ. ದೂರು ದಾಖಲಾದ ಕೇವಲ ಮೂರು ಗಂಟೆಗಳಲ್ಲಿ ಪೊಲೀಸರು ಬಾಲಕಿಯನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಬಾಲಕಿಯು ಸ್ನೇಹಿತರ ಮನೆಯಲ್ಲಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿದ್ದಾಳೆ.
ತನಿಖೆ ಸಂದರ್ಭದಲ್ಲಿ ಭೇಟಿಯಾಗುವ ಸಲುವಾಗಿ ವಾಟ್ಸಾಪ್ ಗ್ರೂಪ್ನಲ್ಲಿ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಪುಟ್ಟ ಮಕ್ಕಳ ಕೈಗೂ ಮೊಬೈಲ್ ಸಿಕ್ಕಿದ್ದು ಇದರಿಂದ ಇಷ್ಟೆಲ್ಲ ಅವಾಂತರವಾಗಿದೆ. ಪೋಷಕರು ಆದಷ್ಟು ಮಕ್ಕಳ ಸೋಶಿಯಲ್ ಮೀಡಿಯಾದ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು ಎಂದು ಜಮಲಾಪುರ ಸ್ಟೇಷನ್ ಹೌಸ್ ಆಫೀಸರ್ ಕುಲ್ವಂತ್ ಸಿಂಗ್ ಹೇಳಿದ್ದಾರೆ.