ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರ ಪುತ್ರ ನವಜಿತ್ ಸಿಂಗ್, ಭಾನುವಾರ ಮೊಹಾಲಿಯ ಗುರುದ್ವಾರದಲ್ಲಿ ಸರಳ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ವಿವಾಹ ಮಹೋತ್ಸವದ ಕೆಲವು ಫೋಟೋಗಳನ್ನು ಮುಖ್ಯಮಂತ್ರಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿವಾಹ ಕಾರ್ಯಕ್ರಮದಲ್ಲಿ ಹಲವಾರು ಕಾಂಗ್ರೆಸ್ ನಾಯಕರು, ಶಾಸಕರು ಮತ್ತು ಸಂಸತ್ತಿನ ಸದಸ್ಯರು ಮದುವೆಗೆ ಹಾಜರಾಗಿದ್ದರು. ಆದರೆ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಈ ಮೂಲಕ ಸಿಧು, ಕಾಂಗ್ರೆಸ್ ನಾಯಕರ ಜೊತೆಗಿನ ಮುನಿಸು ಹೆಚ್ಚಿಸಿದ್ದಾರೆ.
ಉಭಯ ನಾಯಕರ ನಡುವಿನ ಉದ್ವಿಗ್ನತೆಯ ನಡುವೆ, ನವಜೋತ್ ಸಿಂಗ್ ಸಿಧು ಚರಣ್ಜಿತ್ ಸಿಂಗ್ ಚನ್ನಿ ಅವರ ಪುತ್ರನ ವಿವಾಹ ಸಮಾರಂಭಕ್ಕೆ ಗೈರಾಗಿದ್ದು, ಬದಲಾಗಿ ವೈಷ್ಣೋದೇವಿಗೆ ತೆರಳಿದ್ದರು. “ನವರಾತ್ರಿಯ ಸಮಯದಲ್ಲಿ ತಾಯಿಯ ದರ್ಶನವು ಸಮನ್ವಯಗೊಳಿಸುವುದು. ಆತ್ಮದಿಂದ ಎಲ್ಲಾ ಕೊಳೆಯನ್ನು ತೊಳೆಯುತ್ತದೆ” ಎಂದು ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿ ಫೋಟೋ ಹಂಚಿಕೊಂಡಿದ್ದಾರೆ.
ಜುಲೈ ತಿಂಗಳಲ್ಲಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನಾಗಿ ನವಜೋತ್ ಸಿಂಗ್ ಸಿಧು ಆಯ್ಕೆಯಾಗಿದ್ದರು. ಚರಣಜಿತ್ ಸಿಂಗ್ ಸಿಎಂ ಆದ ಬಳಿಕ ದಿಢೀರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಧು, ಕಾಂಗ್ರೆಸ್ ಪಕ್ಷದಲ್ಲಿ ಇರುವುದಾಗಿ ಘೋಷಿಸಿದ್ದಾರೆ.