
ಇದರ ಮಧ್ಯೆ ಟ್ವಿಟ್ಟರ್ ಸಂಸ್ಥೆ ಮಾಡಿದ ಕೆಲಸವೊಂದು ಅಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಟ್ವಿಟರ್ ಕ್ರಮದ ವಿರುದ್ಧ ಕನ್ನಡಿಗರು ತಿರುಗಿಬಿದ್ದಿದ್ದು ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದರು. ಇದೀಗ ತನ್ನ ತಪ್ಪು ತಿದ್ದಿಕೊಂಡಿರುವ ಟ್ವಿಟ್ಟರ್ ಸಂಸ್ಥೆ ಪ್ರಮಾದವನ್ನು ಸರಿಪಡಿಸಿದೆ.
ಹೌದು, ಟ್ವಿಟ್ಟರ್ ಸಂಸ್ಥೆ ಸೆಲೆಬ್ರಿಟಿಗಳ ಅಧಿಕೃತ ಟ್ವಿಟರ್ ಖಾತೆಗೆ ‘ಬ್ಲೂ ಟಿಕ್’ ನೀಡುತ್ತಿದ್ದು, ಇದರಿಂದ ಅಸಲಿ ಮತ್ತು ನಕಲಿ ಖಾತೆಗಳನ್ನು ಗುರುತಿಸಲು ಸಹಾಯವಾಗುತ್ತಿತ್ತು. ಹಾಗೆಯೇ ಪುನೀತ್ ರಾಜಕುಮಾರ್ ಅವರ ಖಾತೆಗೆ ಬ್ಲೂ ಟಿಕ್ ನೀಡಲಾಗಿತ್ತು.
ಪುನೀತ್ ರಾಜಕುಮಾರ್ ಅವರ ನಿಧನ ನಂತರ ಖಾತೆ ನಿಷ್ಕ್ರಿಯವಾಗಿದ್ದರಿಂದ ಟ್ವಿಟರ್ ಸಂಸ್ಥೆ ಬ್ಲೂ ಟಿಕ್ ಹಿಂಪಡೆದಿತ್ತು. ಆದರೆ ಅಭಿಮಾನಿಗಳು ಇದರಿಂದ ತೀವ್ರವಾಗಿ ಅಸಮಾಧಾನಗೊಂಡು #reverifypunithrajkumartwitter ಎಂಬ ದೊಡ್ಡ ಅಭಿಯಾನವನ್ನು ಆರಂಭಿಸಿದ್ದರು. ಇದಕ್ಕೆ ಮಣಿದಿರುವ ಟ್ವಿಟ್ಟರ್ ಸಂಸ್ಥೆ ಈಗ ಪುನೀತ್ ರಾಜಕುಮಾರ್ ಅವರ ಟ್ವಿಟರ್ ಖಾತೆಗೆ ಮತ್ತೆ ಬ್ಲೂಟಿಕ್ ನೀಡಿದೆ.