ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳು ನಟ ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಸಿದ್ಧಪಡಿಸಿರುವ ಉಪಗ್ರಹವನ್ನು 2024ರ ಮಾರ್ಚ್ ನಲ್ಲಿ ಉಡಾವಣೆ ಮಾಡುವ ಸಾಧ್ಯತೆ ಇದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು, ಶಾಲಾ ಮಕ್ಕಳು ಅಭಿವೃದ್ಧಿಪಡಿಸಿದ್ದ ಪುನೀತ್ ರಾಜಕುಮಾರ್ ಉಪಗ್ರಹವನ್ನು 2024ರ ಮಾರ್ಚ್ ನಲ್ಲಿ ಉಡಾವಣೆ ಮಾಡಲು ಇಸ್ರೋ ಅವಕಾಶ ನೀಡುವ ಸಾಧ್ಯತೆ ಇದ್ದು, ಇಸ್ರೋ ಜೊತೆಗೆ ಸತತ ಸಂಪರ್ಕದಲ್ಲಿ ಇರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಪುನೀತ್ ಉಪಗ್ರಹ ಯೋಜನೆಯ ಪ್ರಗತಿ ಕುರಿತು ಸಚಿವರು ಸಭೆ ನಡೆಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದಲ್ಲಿ ಭಾರತೀಯ ಉಪಗ್ರಹ ಸಂಶೋಧನಾ ಸಂಸ್ಥೆ. ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ನಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಸರ್ಕಾರಿ ಶಾಲೆ ಮಕ್ಕಳಿಗೆ ಕ್ಯೂಬ್ ಸ್ಯಾಟ್ಸ್ ಸಬ್ ಸಿಸ್ಟಮ್ ಬಗ್ಗೆ ತರಬೇತಿ ನೀಡಲಾಗಿದೆ. ಪುನೀತ್ ರಾಜಕುಮಾರ್ ಉಪಗ್ರಹದ ಮೂಲಕ ಕಳುಹಿಸುವ ಸೆಕೆಂಡರಿ ಪ್ಲೇಲೋಡ್ ಗಳನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ. ಉಳಿದ ಪ್ರಕ್ರಿಯೆಗಳು ಪ್ರಗತಿಯಲ್ಲಿದ್ದು, ಐಟಿಸಿಎಯಿಂದ ಮುಂದಿನ ವರ್ಷ ಮಾರ್ಚ್ ನಲ್ಲಿ ಪುನೀತ್ ಉಪಗ್ರಹ ಉಡಾವಣೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ.