ಮೈಸೂರು: ಈ ಬಾರಿ ದಸರಾ ಉತ್ಸವದ ಆಹ್ವಾನ ಪತ್ರಿಕೆಯನ್ನು ಇಂಗ್ಲೀಷ್ ನಲ್ಲಿ ಮುದ್ರಣ ಮಾಡಲಾಗಿದೆ. ಮೈಸೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಭಾಗಿಯಾಗಲಿದ್ದಾರೆ. ಹೀಗಾಗಿ ಮೊದಲ ದಿನದ ಆಹ್ವಾನ ಪತ್ರಿಕೆಯನ್ನು ಇಂಗ್ಲಿಷ್ ನಲ್ಲಿ ಮುದ್ರಣ ಮಾಡಲಾಗಿದೆ.
ಸೆಪ್ಟೆಂಬರ್ 23 ರಿಂದ 25 ರವರೆಗೆ ರೈತರು, ಗ್ರಾಮೀಣ ದಸರಾ ನಡೆಯಲಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೈಸೂರಿನ ಅರಮನೆಯಲ್ಲಿ 8 ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 10 ದಿನಗಳ ಕಾಲ ಆಹಾರಮೇಳ ನಡೆಯಲಿದೆ.
ಸೆಪ್ಟೆಂಬರ್ 26 ರಿಂದ 7 ದಿನ ಯೋಗ ದಸರಾ ಉತ್ಸವ ನಡೆಯಲಿದೆ. ಸೆಪ್ಟೆಂಬರ್ 27ರಿಂದ 7 ದಿನ ಯುವ ದಸರಾ ಉತ್ಸವ ನಡೆಯಲಿದ್ದು, 7 ದಿನದಲ್ಲಿ ಒಂದು ದಿನ ಪುನೀತ್ ರಾಜಕುಮಾರ್ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಒಂದು ದಿನ ಪುನೀತ್ ರಾಜಕುಮಾರ್ ಹಾಡುಗಳಿಗೆ ಮೀಸಲಾಗಿಡಲಾಗಿದೆ.
ಯುವ ದಸರಾದಲ್ಲಿ ಚಲನಚಿತ್ರೋತ್ಸವ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಭಾಗಿಯಾಗಲಿದ್ದಾರೆ. ‘ಬೆಟ್ಟದ ಹೂ’ ಚಿತ್ರ ಪ್ರದರ್ಶನ ಇರುತ್ತದೆ. ಶಕ್ತಿಧಾಮದ ಮಕ್ಕಳೊಂದಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಸಿನಿಮಾ ವೀಕ್ಷಿಸಲಿದ್ದಾರೆ.