ಮಹಾಮಾರಿ ಕೊರೊನಾ ಸೋಂಕಿಗೆ ಪ್ರಮುಖ ಲಸಿಕೆಯಾಗಿರುವ ಕೋವಿಶೀಲ್ಡ್ ನಿಂದ ಅಡ್ಡ ಪರಿಣಾಮವಿದೆ ಎಂಬುದನ್ನು ಸ್ವತಃ ಅಸ್ಟ್ರಾಜೆನೆಕಾ ಕಂಪನಿಯೇ ಒಪ್ಪಿಕೊಂಡಿದೆ.
ಕೋವಿಶೀಲ್ಡ್ ಔಷಧಿಯಿಂದ ಉಂಟಾಗುವ ಸೈಡ್ ಇಫೆಕ್ಟ್ ಗಳ ಬಗ್ಗೆ ಕೊರೊನಾ ಔಷಧಗಳ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ ಮೊದಲ ಬಾರಿಗೆ ಒಪ್ಪಿಕೊಂಡಿದ್ದು, ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದೆ. ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಮೆದುಳು ಅಥವಾ ದೇಹದ ಇತರೆ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು, ಪ್ಲೇಟ್ ಲೆಟ್ಗಳ ಸಂಖ್ಯೆ ಕಡಿಮೆಯಾಗುವ ಸಮಸ್ಯೆ ಎದುರಾಗಬಹುದು. ಪಾರ್ಶ್ವವಾಯು, ಹೃದಯಸ್ತಂಭನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ ಎಂದು ಸಂಸ್ಥೆ ಒಪ್ಪಿಕೊಂಡಿದೆ.
ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ಸ್ವತಃ ಔಷಧ ತಯಾರಿಕಾ ಕಂಪನಿಯೇ ಒಪ್ಪಿಕೊಂಡಿರುವ ಬೆಳವಣಿಗೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಳೆ ಪೋಸ್ಟ್ ಒಂದು ವೈರಲ್ ಆಗಿದೆ.
ಅಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವ್ಯಾಕ್ಸಿನ್ ಹಾಕಿಸಿಕೊಂಡ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದರು. ಇದಕ್ಕೆ ಅಭಿಮಾನಿಯೊಬ್ಬರು, ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಳ್ಳಬೇಡಿ. 45 ವರ್ಷ ಮೇಲ್ಪಟ್ಟವರಿಗೆ ಈ ವ್ಯಾಕ್ಸಿನ್ ಒಳ್ಳೆಯದಲ್ಲ ಎಂದು ಸಲಹೆ ನೀಡಿ ಪೋಸ್ಟ್ ಮಾಡಿದ್ದರು. ಇದೀಗ ಕೋವಿಶೀಲ್ಡ್ ಅಡ್ಡಪರಿಣಾಮದ ಬಗ್ಗೆ ಸ್ವತಃ ಕಂಪನಿಯೇ ಒಪ್ಪಿಕೊಳ್ಳುತ್ತಿರುವ ಸಂದರ್ಭದಲ್ಲೇ ಪುನೀತ್ ರಾಜ್ ಕುಮಾರ್ ಗೆ ಅಭಿಮಾನಿ ಹಾಕಿದ್ದ ಪೋಸ್ಟ್ ಮತ್ತೆ ವೈರಲ್ ಆಗುತ್ತಿದೆ.